Home ಮುಖಪುಟ ಸುದ್ದಿ ಹಾಸನಾಂಬ ಜಾತ್ರಾ ಮಹೋತ್ಸವ : ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ

ಹಾಸನಾಂಬ ಜಾತ್ರಾ ಮಹೋತ್ಸವ : ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ

ಹಾಸನ.ಅ.೨೯- ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ ೧೨:೨೮ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಹಾಸನಾಂಬೆಗೆ ಜೈ, ತಾಯಿಗೆ ಉಘೇ ಉಘೇ ಎಂಬ ಭಕ್ತರ ಭಕ್ತಿಪೂರ್ವಕ ಜಯಘೋಷಗಳ ನಡುವೆ ದೇವಿಯ ದರ್ಶನೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ಅರಸು ವಂಶಸ್ಥರಿಂದ ಸಾಂಪ್ರದಾಯಿಕ ಪೂಜೆ ನೆರವೇರಿತು.ಪೂರ್ವ ಸಂಪ್ರದಾಯದಂತೆ ತಳವಾರ ವಂಶಸ್ಥ ನಂಜರಾಜು ವಿಶೇಷ ಪೂಜೆ ಸಲ್ಲಿಸಿ,ವಂಶಪಾರಂಪರ್ಯವಾಗಿ ಬಂದಿರುವ ಪವಿತ್ರ ಖಡ್ಗದಿಂದ ಗೊನೆಕಟ್ಟಿದ್ದ ಬಾಳೆ ಕಂಬವನ್ನು ಕಡಿಯುವ ಮೂಲಕ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಬಾಳೆ ಕಂಬ ಕಡಿಯುತ್ತಿದ್ದಂತೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು.ಬಾಗಿಲು ತೆರೆದ ಮೊದಲ ದಿನದಂದು ಯಾವುದೇ ಆಭರಣ ಹಾಗೂ ವಸ್ತ್ರಾಲಂಕಾರಗಳಿಲ್ಲದ ದೇವಿಯ ವಿಶ್ವರೂಪ ದರ್ಶನ ಪಡೆದ ಮಠಾಧೀಶರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಪುನೀತಭಾವ ಅನುಭವಿಸಿದರು.

ಈ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷಣಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ ಎಂ ಶಿವಲಿಂಗೇಗೌಡ, ಮುಜರಾಯಿ ಸಚಿವ ಬಸಂತಪ್ಪ ಸ್ಥಳೀಯ ಶಾಸಕ ಸ್ವರೂಪ ಪ್ರಕಾಶ್ ಸಾಕ್ಷಿಯಾದರು.

ಇದೇ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿ.ಪಂ ಸಿಇಒ ಶುಭಂ ಶುಕ್ಲಾ, ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಗರುಡ ದರ್ಶನದೊಂದಿಗೆ ದೇವಾಲಯದ ವಾರ್ಷಿಕ ಆಚರಣೆಗಳಿಗೆ ಮತ್ತಷ್ಟು ಮಹತ್ವ ದೊರೆಯಲಿದ್ದು, ಕರ್ನಾಟಕದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ಹಾಸನಾಂಬ ದೇವಿಯ ದರ್ಶನೋತ್ಸವವು ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರನ್ನು ಆಕರ್ಷಿಸುತ್ತಿದೆ.ಭಕ್ತರು ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆಯಲು ಉತ್ಸುಕರಾಗಿದ್ದಾರೆ. ಜೊತೆಗೆ ಬೇಡಿದ ಇಷ್ಟಾರ್ಥಗಳನ್ನು ಅಧಿದೇವತೆ ಈಡೇರಿಸುತ್ತಾಳೆ ಎಂಬ ನಂಬಿಕೆ ಇರುವುದರಿಂದ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಜನ ದೇವಿ ದರ್ಶನಕ್ಕಾಗಿ ಆಗಮಿಸುತ್ತಾರೆ. ಬರುವ ಭಕ್ತರಿಗೆ ಮಳೆ-ಬಿಸಿಲಿಂದ ರಕ್ಷಣೆ ನೀಡಲು ದೇಗುಲದ ಹೊರಗಡೆ ಟೆಂಟ್ ವ್ಯವಸ್ಥೆ ಸಹ ಮಾಡಲಾಗಿದೆ.

ಹಾಸನಾಂಬೆ ದೇವಾಲಯದ ಆವರಣವನ್ನು ಹೂವಿನ ಅಲಂಕಾರ, ತೆಂಗಿನ ಗರಿ ಕಲೆ ಬಳಸಿ ದೇವಲೋಕದಂತೆ ಸೃಷ್ಟಿಸಲಾಗಿದೆ.ದೇಗುಲದ ಮುಂಭಾಗದಲ್ಲಿ ಚಿತ್ತಾಕರ್ಷಕ ಆರ್ಚ್ ನಿರ್ಮಿಸಲಾಗಿದ್ದು, ನಂದಾದೀಪದ ಪ್ರತಿಕೃತಿಯನ್ನು ಹೂವಿನಿಂದ ಅಲಂಕರಿಸಲಾಗಿದೆ. ನಟರಾಜನ ಆಕರ್ಷಕ ವಿಗ್ರಹವನ್ನು ಸುತ್ತಲೂ ಗುಲಾಬಿ ಮತ್ತು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ಇದಲ್ಲದೆ, ಸಪ್ತಮಾತೃಕೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅವುಗಳ ಇತಿಹಾಸ ಮತ್ತು ಪುರಾಣವನ್ನು ಭಕ್ತರಿಗೆ ತಿಳಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ.ಚಾಮುಂಡಿ, ಇಂದ್ರಾಣಿ, ವಾರಾಹಿ, ವೈಷ್ಣವಿ, ಕೌಮಾರಿ, ಮಹೇಶ್ವರಿ, ಬ್ರಾಹ್ಮಿ ಈ ಸಪ್ತಮಾತೃಕೆಯರು ಹಾಸನದಲ್ಲಿ ನೆಲಸಿದ ಹಿನ್ನೆಲೆಯನ್ನು ಅನಾವರಣಗೊಳಿಸಲಾಗಿದೆ.

ಇಂದಿನಿಂದ ಆರಂಭಗೊಂಡಿರುವ ದರ್ಶನೋತ್ಸವ ನವೆಂಬರ್ ೧೧ ರವರೆಗೆ ಒಟ್ಟು ೧೪ ದಿನಗಳ ಕಾಲ ನಡೆಯಲಿದ್ದು, ಮೊದಲ ಮತ್ತು ಕೊನೆಯ ದಿನವನ್ನು ಹೊರತುಪಡಿಸಿ ೧೨ ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗಾಗಿ ಜಿಲ್ಲಾಡಳಿತ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.ನಾಳೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿದ್ದು,ಭಕ್ತರಿಗಾಗಿ ಸುಮಾರು ೯.೫ ಕಿಲೋಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿದೆ.
ದೇವಾಲಯದ ಸುತ್ತ ಬ್ಯಾರಿಕೇಡಿಂಗ್, ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಸಂತೆಪೇಟೆ ಸರ್ಕಲ್‌ನಿಂದ ಸಾರ್ವಜನಿಕ ದರ್ಶನಕ್ಕೆ ಪ್ರವೇಶ ನೀಡಲಾಗಿದೆ.೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಸರಳ ಮತ್ತು ಉಚಿತ ವಿಶೇಷ ದರ್ಶನದ ವ್ಯವಸ್ಥೆ ಇರಲಿದೆ.೦.೩೦ ರಿಂದ ೧೨.೩೦ರ ವರೆಗೆ ಶಿಷ್ಟಾಚಾರದಲ್ಲಿ ಬರುವವರಿಗೆ ದರ್ಶನ ನೀಡಲಾಗುತ್ತಿದೆ. ಪ್ರವಾಸಿ ಮಂದಿರದಲ್ಲಿ ನೋಂದಾಯಿಸಿಕೊಂಡು ಗಣ್ಯರು ದರ್ಶನಕ್ಕೆ ಬರಬೇಕಿದೆ.

ಲಕ್ಷಾಂತರ ಭಕ್ತರ ದೇವಿ ದರ್ಶನಕ್ಕೆ ಬರುವ ಸಾಧ್ಯತೆ ಇದ್ದು, ಭದ್ರತೆಗಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯದ ಐದು ಜಿಲ್ಲೆಗಳಿಂದ ಪೊಲೀಸರ ನಿಯೋಜನೆ ಮಾಡಿದ್ದು, ಐಜಿಪಿ ಡಾ. ಬೋರಲಿಂಗಯ್ಯ, ಹಾಸನ ಎಸ್ಪಿ ಶುಭಾನ್ವಿತಾ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಐದು ಜಿಲ್ಲೆಗಳ ಎಸ್ಪಿಗಳು ಶಿಫ್ಟ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ.ಟ್ರಾಫಿಕ್ ನಿಯಂತ್ರಣಕ್ಕೂ ವಿಶೇಷ ಪಡೆ ನಿಯೋಜನೆ ಮಾಡಲಾಗಿದೆ. ನಾಳೆ ಬೆಳಗ್ಗೆ ೬ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.