
ಬೆಂಗಳೂರು, ಅ. ೨೯- ಬೆಂಗಳೂರಿನ ವರ್ಕ್ಟೆಕ್ ಕಂಪನಿ ಅನ್ಲಾಕ್ಸ್, ನಗರದ ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಕಚೇರಿಯಲ್ಲಿ ಅಕ್ಟೋಬರ್ ೨೭ ಮತ್ತು ೨೮ರಂದು ೨೪ ಗಂಟೆಗಳ ಹ್ಯಾಕಥಾನ್ ಆಯೋಜಿಸಿತ್ತು.
ಕರ್ನಾಟಕದ ವಿವಿಧ ಭಾಗಗಳಿಂದ ೧,೫೦೦ಕ್ಕೂ ಹೆಚ್ಚು ಅರ್ಜಿದಾರರ ಪೈಕಿ ಆಯ್ಕೆಯಾದ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಭಾಷೆಗಳಲ್ಲಿ ಯಾವುದೇ ಪರಿಕಲ್ಪನೆಯನ್ನು ದೃಶ್ಯರೂಪದಲ್ಲಿ ವಿವರಿಸಬಲ್ಲ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಕನನ್ನು ಅಭಿವೃದ್ಧಿಪಡಿಸುವುದು ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದ ಸವಾಲಾಗಿತ್ತು.
ಸ್ಪರ್ಧಾರ್ಥಿಗಳು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು, ವಿವಿಧ ಪರಿಹಾರ ಮಾರ್ಗಗಳನ್ನು ಪರಿಶೀಲಿಸಲು ಹಾಗೂ ತಮ್ಮ ಆಲೋಚನೆಗಳನ್ನು ಕಾರ್ಯನಿರ್ವಹಿಸುವ ಮಾದರಿಯಾಗಿ ರೂಪಿಸಲು ನಿರಂತರ ೨೪ ಗಂಟೆಗಳ ಕಾಲ ಶ್ರಮಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ನಿರ್ಧಾರಗಳನ್ನು ಕೈಗೊಳ್ಳುವುದು, ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ನಿರೀಕ್ಷಿತ ಫಲಿತಾಂಶ ದೊರೆಯದಿದ್ದಾಗ ತಮ್ಮ ಕಾರ್ಯವಿಧಾನವನ್ನು ಬದಲಿಸಿಕೊಳ್ಳುವುದು ಅವರ ಮುಂದಿದ್ದ ಸವಾಲುಗಳಾಗಿದ್ದವು. ನಿಗದಿತ ಸಮಯದ ಮಿತಿಯು ಆದ್ಯತೆಗಳನ್ನು ನಿರ್ಧರಿಸಿ, ಕಾರ್ಯಸಾಧ್ಯವಾದ ಪರಿಹಾರ ರೂಪಿಸುವತ್ತ ಗಮನ ಹರಿಸಲು ನೆರವಾಯಿತು.
ಈ ಹ್ಯಾಕಥಾನ್ನಲ್ಲಿ ಆರ್ವಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ವಿಜೇತರಾಗಿದ್ದು ತಂಡವು ೨೫,೦೦೦ರೂ. ನಗದು ಬಹುಮಾನವನ್ನು ಪಡೆದುಕೊಂಡಿತು.
ಭವಿಷ್ಯದ ಕಾರ್ಯಕ್ಷೇತ್ರಕ್ಕೆ ಅಗತ್ಯವಾದ ಮೂಲಸೌಕರ್ಯ ನಿರ್ಮಿಸುವುದು ಆನ್ಲಾಕ್ಸ್ನ ಉದ್ದೇಶವಾಗಿದೆ. ಉದ್ಯಮಗಳು, ಸಂಸ್ಥೆಗಳು ಮತ್ತು ಪ್ರತಿಭಾವಂತರನ್ನು ಸಂಪರ್ಕಿಸುವ ಮೂಲಕ ನೈಜ ಅಗತ್ಯಗಳನ್ನು ಯೋಜನೆಗಳಾಗಿ ಪರಿವರ್ತಿಸಿ, ಅವುಗಳ ಅನುಷ್ಠಾನಕ್ಕೆ ನೆರವಾಗುವುದು ಕಂಪನಿಯ ಕಾರ್ಯತಂತ್ರವಾಗಿದೆ.
ನೈಜ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸುವುದು ಹಾಗೂ ಅವರು ಕಲಿಕೆಯಿಂದ ಪ್ರಾಯೋಗಿಕ ಕಾರ್ಯಕ್ಷೇತ್ರಕ್ಕೆ ನೇರವಾಗಿ ಪ್ರವೇಶಿಸಲು ಅವಕಾಶ ಕಲ್ಪಿಸುವುದು ಈ ಹ್ಯಾಕಥಾನ್ನ ಉದ್ದೇಶವಾಗಿತ್ತು ಎಂದು ಕಂಪನಿ ತಿಳಿಸಿದೆ. ಕೌಶಲಗಳನ್ನು ನೈಜ ಕಾರ್ಯಗಳಲ್ಲಿ ಬಳಸಿದಾಗ ಅವು ಮತ್ತಷ್ಟು ವೃದ್ಧಿಸುತ್ತವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ತಂತ್ರಾಂಶ ಅಭಿವೃದ್ಧಿಯ ವಿಧಾನಗಳನ್ನು ಬದಲಿಸುತ್ತಿರುವ ಹಿನ್ನೆಲೆಯಲ್ಲಿ, ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ, ವಿವಿಧ ಪರಿಹಾರಗಳನ್ನು ವಿಶ್ಲೇಷಿಸುವ ಹಾಗೂ ನೈಜ ಸವಾಲುಗಳ ನಡುವೆಯೂ ಉಪಯುಕ್ತ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯ ಹೊಂದಿರುವವರ ಅಗತ್ಯ ಹೆಚ್ಚುತ್ತಿದೆ. ಇಂತಹ ಹ್ಯಾಕಥಾನ್ಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹಾಗೂ ಸಂಸ್ಥೆಗಳಿಗೆ ಪ್ರತಿಭಾವಂತರನ್ನು ಗುರುತಿಸಲು ವೇದಿಕೆಯಾಗುತ್ತವೆ.
ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮವು ಪರಸ್ಪರ ಪರಿಚಯ, ವಿಚಾರ ವಿನಿಮಯ ಮತ್ತು ಹೊಸ ಆಲೋಚನೆಗಳ ಹಂಚಿಕೆಗೂ ಅವಕಾಶ ಕಲ್ಪಿಸಿತು. ಸಮಸ್ಯೆಯೊಂದನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಅದಕ್ಕೆ ಕಾರ್ಯನಿರ್ವಹಿಸುವ ಪರಿಹಾರ ರೂಪಿಸುವವರೆಗಿನ ಪ್ರಕ್ರಿಯೆಯನ್ನು ನೇರವಾಗಿ ಅನುಭವಿಸಲು ಈ ಹ್ಯಾಕಥಾನ್ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಅವಕಾಶ ನೀಡಿತು.


























