ಧಾರವಾಡ, ಅ.೨೯: ವರಕವಿ ಬೇಂದ್ರೆಯವರು ಕೇವಲ ಕವಿಗಳಾಗಿರದೇ, ನಾಟಕಕಾರರು, ವಿಮರ್ಶಕರು, ಅನುವಾದಕರು, ಸಂಖ್ಯಾಶಾಸ್ತçಜ್ಞರು, ವೇದ-ಉಪನಿಷತ್ತುಗಳ ಅಪಾರ ಜ್ಞಾನ ಹೊಂದಿದ ಇವರು ಬಹುಭಾಷಾ ಪಾಂಡಿತ್ಯವನ್ನು ಹೊಂದಿದ ಸಾಹಿತ್ಯ ತಪಸ್ವಿಗಳಾಗಿದ್ದರು ಎಂದು ಹುಬ್ಬಳ್ಳಿಯ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಕೌಜಲಗಿ ಹೇಳಿದರು.
ಅವರು ಡಾ.ದ.ರಾ.ಬೇಂದ್ರೆ ರಾಷ್ಟಿçÃಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ.ದ.ರಾ.ಬೇಂದ್ರೆ ಭವನ, ಸಾಧನಕೇರಿಯಲ್ಲಿ ಏರ್ಪಡಿಸಿದ್ದ ವರಕವಿ ಡಾ.ದ.ರಾ.ಬೇಂದ್ರೆ ಅವರ ೪೫ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕೆ.ಎಸ್.ಕೌಜಲಗಿ ಅವರು ಬೇಂದ್ರೆಯವರ ಕವನಗಳು ನಮಗೆ ಅರ್ಥವಾಗಬೇಕೆಂದರೆ, ಕವನ ರಚನೆಯ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಕಾರ್ಯವನ್ನು ಡಾ.ವಾಮನ ಬೇಂದ್ರೆಯವರು ಬೇಂದ್ರೆಯವರ ಎಲ್ಲ ಕವನಗಳನ್ನು ವಿಂಗಡಿಸಿ ಔದುಂಬರ ಗಾಥೆ ಜೀವನ ಮಹಾಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಬೇಂದ್ರೆಯವರು ನವೋದಯ, ನವ್ಯ, ಪ್ರಗತಿಶೀಲ ಹಾಗೂ ಬಂಡಾಯದಲ್ಲೂ ತಮ್ಮ ಕವನಗಳನ್ನು ರಚಿಸಿಕೊಟ್ಟಿದ್ದಾರೆ. ತಮ್ಮ ಸಾಮರ್ಥ್ಯವನ್ನು ಎಲ್ಲ ಕ್ಷೇತ್ರದಲ್ಲಿ ಅಭಿವ್ಯಕ್ತಿಗೊಳಿಸುವ ಮೂಲಕ ಇವರೊಬ್ಬ ಪ್ರಯೋಗಶೀಲ ಕವಿಗಳಾಗಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಟ್ರಸ್ಟ್ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿ, ಅಕ್ಟೋಬರ್ ೨೬, ೧೯೮೧ ರಂದು ಬೆಳಕಿನ ಹಬ್ಬ, ದೀಪಾವಳಿ ನರಕ ಚತುದರ್ಶಿಯಂದು ಡಾ.ದ.ರಾ.ಬೇಂದ್ರೆಯವರ ನಿಧನದ ಸುದ್ದಿ ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಕತ್ತಲೆಯ ಛಾಪು ಆವರಿಸಿದಂತಾಗಿತ್ತು. ಬೇಂದ್ರೆಯವರ ಮನೆಮಾತು ಮರಾಠೀ ಆಗಿದ್ದರೂ ಕನ್ನಡ ಭಾಷೆಗೆ ವಿಶಿಷ್ಠ ಸ್ಥಾನ ಕಲ್ಪಿಸಿದವರು. ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಕವಿವಾಣಿಯನ್ನು ನೀಡಿದ ಮಹಾನ್ ಕವಿ ಬೇಂದ್ರೆ. ಬೇಂದ್ರೆಯವರ ಜೀವಿತಾವಧಿಯಲ್ಲೇ ನಾವೂ ಬಾಳಿದ್ದೇವೆನ್ನುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಇಲ್ಲಿಯವರೆಗೆ ೧೨ ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅದರಲ್ಲಿ ಕುವೆಂಪು ಮತ್ತು ದೇ. ಜವರೇಗೌಡ ಮಾತ್ರ ಸಾಹಿತ್ಯ ಕ್ಷೇತ್ರದಿಂದ ಇದ್ದಾರೆ. ಈಗ ಸರ್ಕಾರವು ವರಕವಿ ಡಾ.ದ.ರಾ.ಬೇಂದ್ರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಆ ಮೂಲಕವಾಗಿ ಇಡಿಯ ಉತ್ತರ ಕರ್ನಾಟಕವನ್ನು ಗೌರವಿಸಬೇಕೆಂದು ಡಾ. ಸರಜೂ ಕಾಟ್ಕರ್ ಆಗ್ರಹಿಸಿದರು.
ಆರಂಭದಲ್ಲಿ ಧಾರವಾಡದ ಸ್ವರಸಂವಾದಿನಿ ಸಂಗೀತ ವಿದ್ಯಾಲಯದ ಕಲಾತಂಡದವರು ಡಾ.ದ.ರಾ.ಬೇಂದ್ರೆಯವರ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಡಾ.ಶಿವರಾಜ ಈರಾಪುರಂ, ಹಾರ್ಮೊನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ ಸಾಥ್ ಸಂಗತ ನೀಡಿದರು. ಕಲಾವಿದ ಅನಂತ ದೇಶಪಾಂಡೆ ಅವರು ಡಾ.ದ.ರಾ.ಬೇಂದ್ರೆ ಅವರ ಅಭಿನಯ ಮಾಡಿದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಟ್ರಸ್ಟ್ ಸದಸ್ಯ ಪ್ರೊ.ಶೀಲಾಧರ ಮುಗಳಿ ವಂದಿಸಿದರು. ಟ್ರಸ್ಟ್ ಸದಸ್ಯ ಇಮಾಮ್ಸಾಬ್ ವಲ್ಲೆಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರೇಶ ಕುಲಕರ್ಣಿ, ಪ್ರೊ.ಮಲ್ಲಿಕಾರ್ಜುನ ಹಿರೇಮಠ, ಡಾ.ಕೃಷ್ಣ ಕಟ್ಟಿ, ಡಾ.ಎಸ್.ಎಂ.ಶಿವಪ್ರಸಾದ್, ಪ್ರೊ.ಸಿ.ಕೆ.ನಾವಲಗಿ, ಬಿ.ಐ.ಈಳಗೇರ, ಸುಮಾ ಕಾಟ್ಕರ್, ಡಾ.ಚಂದ್ರಶೇಖರ ರೊಟ್ಟಿಗವಾಡ, ಡಾ.ಆರ್.ಎಫ್.ನಾಯ್ಕ್, ದೀವಾಕರ ಬಸಾಪೂರ, ಗಣೇಶ ಕದಂ, ಜಯತೀರ್ಥ ಜಹಗೀರದಾರ, ಮಲ್ಲಿಕಾರ್ಜುನ ಚಿಕ್ಕಮಠ, ಮಹಾಂತೇಶ ನರೆಗಲ್, ಎಮ್.ವಿ.ಹೊಸಮನಿ, ಎಸ್.ಎಸ್.ಬಂಗಾರಿಮಠ, ಚಂದ್ರಶೇಖರ ಅಮೀನಗಡ, ಬಸವರಾಜ ಚಿಕ್ಕೂರ, ವಿ.ಜೆ.ಬಡಿಗೇರ, ಡಾ.ಸಂತೋಷ ನಾಯಿಕ ಮುಂತಾದವರು ಉಪಸ್ಥಿತರಿದ್ದರು.




















