
ನವದೆಹಲಿ: ತಮ್ಮ ಜೀವನದ ಬಗ್ಗೆ ಹಲವು ವರ್ಷಗಳಿಂದ ತಪ್ಪು ಮಾಹಿತಿ, ಕಲ್ಪಿತ ಘಟನೆಗಳು ಮತ್ತು ಉತ್ಪ್ರೇಕ್ಷಿತ ಸಂಗತಿಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ತಮ್ಮ ಜೀವನದ ಕಥೆಯನ್ನು ತಾವೇ ಹೇಳಲು ನಿರ್ಧರಿಸಿರುವುದಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
‘ಬಿಲಾಂಗಿಂಗ್ ಎ ಜರ್ನಿ ಆಫ್ ಲವ್’ ತಮ್ಮ ಮುಂಬರುವ ಆತ್ಮಕಥನ ಪುಸ್ತಕದ ಕುರಿತು ಮಾತನಾಡಿರುವ ಅವರು, ಈ ಕೃತಿ ಜನರು ತಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಬದಲಾಯಿಸಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಮುಂದಿನ ತಿಂಗಳು ಪುಸ್ತಕ ಬಿಡುಗಡೆಯಾಗಲಿದ್ದು, ಬಿಡುಗಡೆಯಾದ ಬಳಿಕ ಒಂದಿಷ್ಟು ‘ತಮಾಷೆ’ ನಡೆಯುವುದು ಖಚಿತ ಎಂದು ಅವರು ನಗುತ್ತಲೇ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೋನಿಯಾ, ವಿಡಿಯೊದಲ್ಲಿ ತಮ್ಮ ಆತ್ಮಕಥನ ಬರೆಯಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.
“ದಶಕಗಳಿಂದ ಇತರರು ನನ್ನ ಕಥೆಯನ್ನು ಹೇಳುತ್ತಲೇ ಬಂದಿದ್ದಾರೆ. ಈಗ ನನ್ನ ಸರದಿ ಬಂದಿದೆ” ಎಂಬ ಅರ್ಥದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರತಮ್ಮ ಪತಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗುವ ನಿರ್ಧಾರಕ್ಕೆ ತಾವು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾಗಿ ಸೋನಿಯಾ ಗಾಂಧಿ ಬಹಿರಂಗಪಡಿಸಿದ್ದಾರೆ.
“ನನ್ನ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಆದರೆ ಅವುಗಳಲ್ಲಿ ಹಲವು ಸಂಗತಿಗಳು ಸರಿಯಾಗಿರಲಿಲ್ಲ. ಕೆಲವು ಕಲ್ಪಿತವಾಗಿದ್ದರೆ, ಇನ್ನು ಕೆಲವು ಉತ್ಪ್ರೇಕ್ಷಿತವಾಗಿದ್ದವು. ಹೀಗಾಗಿ ನೈಜ ಸಂಗತಿಗಳು ಹೇಗಿದ್ದವು ಎಂಬುದನ್ನು ನನ್ನದೇ ಮಾತುಗಳಲ್ಲಿ ದಾಖಲಿಸಲು ಇದು ಒಂದು ಅವಕಾಶ ಎಂದು ಭಾವಿಸಿದೆ” ಎಂದು ಅವರು ಹೇಳಿದ್ದಾರೆ.
ತಮ್ಮ ಜೀವನದ ಕುರಿತು ಮತ್ತೊಬ್ಬರು ನೀಡುವ ವಿವರಣೆಯ ಬದಲಿಗೆ, ನಡೆದ ಘಟನೆಗಳನ್ನು ತಮಗೆ ತಿಳಿದಿರುವಂತೆ ದಾಖಲಿಸುವುದು ಈ ಪುಸ್ತಕದ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಆತ್ಮಕಥನ ಓದಿದ ಬಳಿಕ ಕೆಲವರ ಅಭಿಪ್ರಾಯ ಬದಲಾಗಬಹುದು. ಇನ್ನು ಕೆಲವರು ತಮ್ಮ ಬಗ್ಗೆ ಮೊದಲಿಗಿಂತಲೂ ಕೆಟ್ಟ ಅಭಿಪ್ರಾಯ ಹೊಂದಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಇಂತಹ ಪ್ರತಿಕ್ರಿಯೆಗಳು ಸಹಜ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಇಟಲಿಯಿಂದ ಭಾರತಕ್ಕೆ ಬಂದ ಜೀವನದ ಪಯಣ
‘ಬಿಲಾಂಗಿಂಗ್ ಎ ಜರ್ನಿ ಆಫ್ ಲವ್’ ಕೃತಿಯಲ್ಲಿ ಸೋನಿಯಾ ಗಾಂಧಿ ಅವರ ಬಾಲ್ಯದಿಂದ ಹಿಡಿದು ಭಾರತದ ರಾಜಕೀಯ ಮತ್ತು ಗಾಂಧಿ ಕುಟುಂಬದೊಂದಿಗೆ ಬೆಸೆದುಕೊಂಡ ಜೀವನದ ಹಲವು ಪ್ರಮುಖ ಘಟನೆಗಳು ದಾಖಲಾಗಿವೆ.
ಯುದ್ಧಾನಂತರದ ಇಟಲಿಯ ಟೊ ಪ್ರದೇಶದಲ್ಲಿ ಕಳೆದ ಬಾಲ್ಯ, ಬಳಿಕ ಕೇಂಬ್ರಿಡ್ಜ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ 1965ರಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದದ್ದು ಹಾಗೂ ಅವರಿಬ್ಬರ ಪ್ರೇಮಕಥೆ ಪುಸ್ತಕದ ಪ್ರಮುಖ ಭಾಗಗಳಾಗಿವೆ.
ರಾಜೀವ್ ಗಾಂಧಿ ಅವರನ್ನು ವಿವಾಹವಾದ ಬಳಿಕ ಭಾರತಕ್ಕೆ ಬಂದ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅತ್ತೆಯಾಗಿ ಪರಿಚಯಿಸಿಕೊಂಡದ್ದು, ಭಾರತೀಯ ಜೀವನಶೈಲಿಗೆ ಹೊಂದಿಕೊಂಡದ್ದು, ಹಿಂದಿ ಕಲಿತದ್ದು, ಸೀರೆ ಉಡುವುದು ಸೇರಿದಂತೆ ಭಾರತೀಯ ಆಹಾರ ಮತ್ತು ಸಂಸ್ಕೃತಿಗೆ ಹೊಂದಿಕೊಳ್ಳಲು ನಡೆಸಿದ ಪ್ರಯತ್ನಗಳನ್ನೂ ಕೃತಿ ವಿವರಿಸುತ್ತದೆ ಎಂದಿದ್ದಾರೆ.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಜಯಗಳಿಸಿದ ಬಳಿಕ ಸೋನಿಯಾ ಗಾಂಧಿ ಪ್ರಧಾನಿಯಾಗುವ ಅವಕಾಶವನ್ನು ನಿರಾಕರಿಸಿ, ಪಕ್ಷ ಮತ್ತು ಮೈತ್ರಿಕೂಟದ ನಾಯಕತ್ವ ವಹಿಸಿಕೊಂಡ ಘಟನೆಯೂ ಕೃತಿಯಲ್ಲಿ ಸ್ಥಾನ ಪಡೆದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ನಂತರ ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿತು.






















