
ಬೆಂಗಳೂರು.ಅ.೨೯- ಕನ್ನಡ ಚಿತ್ರರಂಗದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕುಟುಂಬಸ್ಥರು ಗುರುವಾರ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಸಹೋದರ ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದ ಇತರ ಸದಸ್ಯರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ, ಅವರು ಇಷ್ಟಪಡುತ್ತಿದ್ದ ತಿನಿಸುಗಳನ್ನು ಸಮರ್ಪಿಸಿದರು. ಪುತ್ರಿ ಧೃತಿ ತಾಯಿ ಅಶ್ವಿನಿ ಅವರೊಂದಿಗೆ ತಂದೆಯ ಸಮಾಧಿಗೆ ಪೂಜೆ ಸಲ್ಲಿಸಿದರು.
ಅಪ್ಪು ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಮಾಧಿಯತ್ತ ಅಭಿಮಾನಿಗಳ ದಂಡೇ ಹರಿದುಬಂದಿತ್ತು. ನೆಚ್ಚಿನ ನಟನನ್ನು ಸ್ಮರಿಸಿದ ಅಭಿಮಾನಿಗಳು ಪುನೀತ್ ರಾಜ್ಕುಮಾರ್ಗೆ ಜೈಕಾರ ಹಾಕಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ವರ್ಷಗಳು ಕಳೆದರೂ ಅಪ್ಪು ಮೇಲಿನ ಅಭಿಮಾನ ಮತ್ತು ಪ್ರೀತಿ ಕಡಿಮೆಯಾಗಿಲ್ಲ ಎಂಬುದಕ್ಕೆ ಅಭಿಮಾನಿಗಳ ಈ ಅಪಾರ ಸಂಖ್ಯೆಯೇ ಸಾಕ್ಷಿಯಾಯಿತು.
ಪುನೀತ್ ರಾಜ್ಕುಮಾರ್ ಸಹೋದರ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ,ಐದನೇ ವರ್ಷವೂ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹತ್ತು ವರ್ಷಗಳಾದರೂ ಇದೇ ರೀತಿಯಲ್ಲಿ ಅಭಿಮಾನಿಗಳು ಆಗಮಿಸುತ್ತಾರೆ ಎಂಬ ವಿಶ್ವಾಸವಿದೆ.ಇಲ್ಲಿ ಬಂದಾಗ ಅಪ್ಪು ನಮ್ಮೊಂದಿಗಿಲ್ಲ ಎಂಬ ಭಾವನೆ ಮೂಡುತ್ತದೆ. ಆದರೆ ಎಲ್ಲೆಡೆ ಅಪ್ಪು ಅವರೇ ಇದ್ದಾರೆ ಎನ್ನಿಸುತ್ತದೆ ಎಂದು ಭಾವುಕರಾದರು.ಅಪ್ಪು ಅವರ ಸ್ಮಾರಕ ನಿರ್ಮಾಣದ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಪುನೀತ್ ರಾಜ್ಕುಮಾರ್ ಸಮಾಜಮುಖಿ ಕಾರ್ಯಗಳ ಮೂಲಕ ಮಾಡಿದ ಪುಣ್ಯದ ಕೆಲಸಗಳನ್ನು ಅಭಿಮಾನಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೇಗೆ ಬದುಕಬೇಕು ಎಂಬುದನ್ನು ಅಪ್ಪು ನಮಗೆಲ್ಲ ಕಲಿಸಿಕೊಟ್ಟಿದ್ದಾರೆ ಎಂದು ರಾಘವೇಂದ್ರ ರಾಜ್ಕುಮಾರ್ ಸ್ಮರಿಸಿದರು.
ನಟ ಯುವ ರಾಜ್ಕುಮಾರ್ ಮಾತನಾಡಿ, ಪ್ರತಿ ವರ್ಷ ಪುಣ್ಯಸ್ಮರಣೆಗೆ ಇಲ್ಲಿಗೆ ಬಂದಾಗ ಜನರು ಪುನೀತ್ ಚಿಕ್ಕಪ್ಪನ ಸಮಾಜಸೇವೆಯನ್ನು ನೆನಪಿಸಿಕೊಳ್ಳುತ್ತಾರೆ. ಅಭಿಮಾನಿಗಳು ಈ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಮನಸ್ಸಿನಲ್ಲಿ ಎಷ್ಟೇ ದುಃಖವಿದ್ದರೂ ಅಪ್ಪು ಮೇಲಿನ ಪ್ರೀತಿಯಿಂದ ಅಭಿಮಾನಿಗಳು ಆಗಮಿಸುತ್ತಾರೆ ಎಂದು ಹೇಳಿದರು.
ಪುನೀತ್ ಚಿಕ್ಕಪ್ಪ ಮಾಡಿದ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಜನರು ಸದಾ ನೆನಪಿಸಿಕೊಳ್ಳುತ್ತಾರೆ. ಅವರ ನೆನಪು ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರುತ್ತದೆ.ನಮ್ಮ ಪ್ರತಿಯೊಂದು ಕಾರ್ಯದಲ್ಲೂ ಚಿಕ್ಕಪ್ಪನ ಪ್ರೇರಣೆ ಇದೆ ಎಂದು ಯುವ ರಾಜ್ಕುಮಾರ್ ಹೇಳಿದರು.
ಅಪ್ಪು ಅವರ ಅಗಲಿಕೆಯ ನೋವು ಕುಟುಂಬಸ್ಥರು ಮತ್ತು ಅಭಿಮಾನಿಗಳಲ್ಲಿ ಇಂದಿಗೂ ಮಾಸಿಲ್ಲ.ಆದರೆ ಅವರು ಮಾಡಿದ ಸಮಾಜಮುಖಿ ಕಾರ್ಯಗಳು, ಸರಳ ವ್ಯಕ್ತಿತ್ವ ಹಾಗೂ ಜನರ ಮೇಲಿಟ್ಟಿದ್ದ ಪ್ರೀತಿ ಅವರನ್ನು ಸದಾ ಜೀವಂತವಾಗಿರಿಸಿವೆ ಎಂದು ತಿಳಿಸಿದರು.
ರಾಜಕೀಯ ಮುಖಂಡರು ನಮನ
ಕನ್ನಡ ಚಿತ್ರರಂಗದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ೫ನೇ ಪುಣ್ಯಸ್ಮರಣೆ ಹಿನ್ನೆಲೆ, ರಾಜಕೀಯ ಮುಖಂಡರು ನಮನ ಸಲ್ಲಿಸಿದ್ದಾರೆ.
ಬಲಗೈಗೆ ತಿಳಿಯದಂತೆ ಎಡಗೈಯಿಂದ ದಾನ ಮಾಡಿದ, ನಿಸ್ವಾರ್ಥ ಸಮಾಜ ಸೇವೆ ಮಾಡಿದ ನಿಜವಾದ ಹೃದಯವಂತ ಲೋಕೋಪಕಾರಿ. ತಮ್ಮ ಸರಳತೆ ಮತ್ತು ನಟನೆಯ ಜೊತೆಗೆ ಮಾನವೀಯತೆಯಿಂದ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದ ಪರಮಾತ್ಮ ಡಾ.ಪುನೀತ್ ರಾಜ್ಕುಮಾರ್. ನೀವು ನಮ್ಮನ್ನು ಅಗಲಿ ೫ ವರ್ಷಗಳ ನಂತರವೂ, ನಿಮ್ಮ ನೆನಪುಗಳು ನಮ್ಮ ಹೃದಯ ಬಡಿತಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವರ್ಷಗಳು ಉರುಳಿದರೂ, ನಮ್ಮ ಪುನೀತ್ ರಾಜ್ಕುಮಾರ್ ಲಕ್ಷಾಂತರ ಹೃದಯಗಳಲ್ಲಿ ಕಳಂಕವಿಲ್ಲದ ಪ್ರೀತಿಯಾಗಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ವ್ಯಕ್ತಿತ್ವ, ಸೌಮ್ಯ ಸರಳತೆ ಮತ್ತು ಸಮಾಜಮುಖಿ ಸೇವೆ ಅಪ್ಪು ಅವರನ್ನು ಅಮರಗೊಳಿಸಿದೆ.ಈ ದಿನದಂದು, ನಮ್ಮ ಕನ್ನಡ ನೆಲದ ರತ್ನವಾದ ಅವರ ಆಶೀರ್ವಾದ ಸ್ಮರಣೆಗೆ ನನ್ನ ಹೃತ್ಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ನಗುಮೊಗದ, ಸರಳ ಸಜ್ಜನ ಮತ್ತು ಅದ್ಭುತ ನಟ ಪುನೀತ್ ರಾಜ್ಕುಮಾರ್ ಅವರ ಪವಿತ್ರ ಸ್ಮರಣಾರ್ಥ ದಿನದಂದು, ಪ್ರೀತಿಯ ನಮನಗಳು. ಅಪ್ಪು ತಮ್ಮ ನಿಷ್ಕಳಂಕ ನಟನೆಯ ಮೂಲಕ ಕನ್ನಡಿಗರ ಹೃದಯಗಳನ್ನು ಗೆದ್ದಿದ್ದರು ಮತ್ತು ತಮ್ಮ ನಗುಮುಖ, ಪ್ರೀತಿ ತುಂಬಿದ ನಡವಳಿಕೆ ಮತ್ತು ನಿಸ್ವಾರ್ಥ ಸಾಮಾಜಿಕ ಸೇವೆಯಿಂದ ಲಕ್ಷಾಂತರ ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡಿಗರ ಹೃದಯಗಳಲ್ಲಿ ಶಾಶ್ವತ ಗೌರವದೊಂದಿಗೆ ಉಳಿದಿರುವ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ಗೆ ಪುಣ್ಯ ಸ್ಮರಣೆಯಂದು ಪ್ರೀತಿಯ ನಮನಗಳು. ನಮ್ಮ ಹೃದಯಗಳಲ್ಲಿ ಕನ್ನಡಿಗರ ಹೆಮ್ಮೆಯ ಅಪ್ಪು ಸದಾ ಚಿರಂಜೀವಿ ಎಂದು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್ ಬಾಲ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು, ಎಲ್ಲರ ಮನೆ ಮಗನಾಗಿ ಜನರ ಪ್ರೀತಿ ಗಳಿಸಿದ ಅಪ್ಪು ೫ ವರ್ಷಗಳ ಹಿಂದೆ ಈ ದಿನದಂದು ನಮ್ಮೆಲ್ಲರನ್ನೂ ಅಗಲಿದರು. ಕರ್ನಾಟಕ ರತ್ನ ಅಪ್ಪು ಅವರ ಈ ಪವಿತ್ರ ಸ್ಮರಣಾರ್ಥ ದಿನದಂದು, ಅವರ ಕಲಾ ಸೇವೆ ಮತ್ತು ಸಾರ್ವಜನಿಕ ಸೇವೆಯನ್ನು ಸ್ಮರಿಸೋಣ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.


























