Home ಜಿಲ್ಲೆ ಕಲಬುರಗಿ ಗುಡಗುಂಟಿಯ ಅಲಸಂದಿ ಹಿಟ್ಟಿನ ಭಜಿ !!

ಗುಡಗುಂಟಿಯ ಅಲಸಂದಿ ಹಿಟ್ಟಿನ ಭಜಿ !!

ಕಲಬುರಗಿ: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಡಗುಂಟಿ ಗ್ರಾಮದ ಹೊಟೇಲೊಂದು ಕಳೆದ 26 ವರ್ಷಗಳಿಂದ ಅಲಸಂದಿ ಕಾಳಿನ ಹಿಟ್ಟಿನಿಂದ ತಯಾರಿಸಿದ ಭಜಿಯಿಂದಲೇ ಹೆಸರಾಗಿದೆ.ಎಲ್ಲೆಡೆ ಸಾಮಾನ್ಯವಾಗಿ ಕಡಲೆ ಹಿಟ್ಟಿನಿಂದ ಭಜಿ ಮಾಡುವರು. ಆದರೆ ಇಲ್ಲಿ ಮಾತ್ರ ಅಲಸಂದಿ ಹಿಟ್ಟಿನಿಂದ ಭಜಿ ಮಾಡುವರು.ಅದರಲ್ಲಿ ದೇವಮ್ಮ ತಯಾರಿಸಿದ ಭಜಿ ಅತ್ಯಂತ ಬೇಡಿಕೆ ಇದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವಷ್ಟು ರುಚಿಯಾಗಿರುವದು
ಹೊಟೇಲೆಂದರೆ ನಮ್ಮಕಣ್ಣ ಮುಂದೆ ಬರುವದು ಟೇಬಲ್, ಕುರ್ಚಿ, ಫ್ಯಾನು, ವೇಟರ್, ಕ್ಲೀನರ್, ಆದರೆ ಈ ಗ್ರಾಮದ ದೇವಮ್ಮನವರ ಹೊಟೇಲ ಸ್ವಲ್ಪ ವಿಭಿನ್ನವಾಗಿದೆ ಇಲ್ಲಿ ಅವರ ಮನೆಯ ಮುಂಭಾಗ ಟಿನ್‍ಶಡ್‍ನಲ್ಲಿ ಇದಾವುದು ಇಲ್ಲ. ಬದಲಿಗೆ ಕಟ್ಟಿಗೆ ಒಲೆಯಲ್ಲಿ ನಿತ್ಯ ಬಿಸಿ ಬಿಸಿ ಅಲಸಂದಿ ಹಿಟ್ಟಿನ ಭಜಿ ತಯಾರಿಸುವರು. ಮನೆಯಲ್ಲಿ ಅಲಸಂದಿ ಬೇಳೆ ರುಬ್ಬುವ ಯಂತ್ರ ಅಳವಡಿಸಿರುವರು. ಇದು ರೀತಿ ಹೊಟೇಲ್ ಅನ್ನುವುದಕ್ಕಿಂತ ಅಡುಗೆ ಮನೆ ಎಂದರೆ ತಪ್ಪಾಗಲಾರದು.
ಮೊದಲು ಅಲಸಂದಿ ಬೇಳೆ ಸ್ವಚ್ಚಗೊಳಿಸಿ ಸುಮಾರು ಎರಡು ಗಂಟೆಗಳ ಕಾಲ ನೀರಲ್ಲಿ ನೆನೆಸಿ ನಂತರ ಚನ್ನಾಗಿ ತೊಳೆದು ರುಬ್ಬುವರು. ಅದರೊಂದಿಗೆ ಬೆಳ್ಳುಳ್ಳಿ ಹಾಗೂ ಉಪ್ಪು ಹಾಕಿ ಹಿಟ್ಟು ಸಿದ್ದಪಡಿಸಿ ನಂತರ ಮೆಣಸಿನಕಾಯಿಯೊಂದಿಗೆ ಭಜಿ ತಯಾರಿಸುವರು .ಹೀಗೆ ಕರಿದ ಭಜಿ ಗರಿ ಗರಿಯಾಗಿ ತಿನ್ನಲು ಸ್ವಾದಿಷ್ಟ ಹಾಗೂ ವಿಶೇಷ ರುಚಿ ಇರುವದು. ಇವು ಎರಡು ದಿನದವರೆಗೂ ಕೆಡುವುದಿಲ್ಲವಂತೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಊರಾಗಿರುವುದರಿಂದ ಸಾಮಾನ್ಯವಾಗಿ ಬೆಂಗಳೂರು ಸೇರಿ ದೂರದ ಊರಿಗೆ ತೆರಳುವ ಜನರು ನೂರು ಇನ್ನೂರು ರೂಪಾಯಿ ಕೊಟ್ಟು ಅಲಸಂದಿ ಭಜಿ ಪಾರ್ಸಲ್ ಒಯ್ಯುವರು. ವಾರಕ್ಕೆ ಎರಡು ಕ್ವಿಂಟಲ್ ಅಲಸಂದಿಯ ಭಜಿ ಮಾರುವದು ಅವರ ವಾರದ ದೈನಂದಿನ ಕಾಯಕವಾಗಿದೆ
-ಗುರುರಾಜ.ಕೆ.ಪಟ್ಟಣಶೆಟ್ಟಿ