
ಬೀದರ್: ಹಿಂದಿ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ನಡುವಿನ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಪ್ರಯಾಗರಾಜ್ನ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥೆ ಹಾಗೂ ಬೀದರ್ನ ಗುರುನಾನಕ್ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ 30ನೇ ರಾಷ್ಟ್ರೀಯ ಅಧಿವೇಶನ ಹಾಗೂ 24ನೇ ಸಾಹಿತ್ಯ ಮೇಳಕ್ಕೆ ಶುಕ್ರವಾರ ಭವ್ಯ ಚಾಲನೆ ನೀಡಲಾಯಿತು.
ನಗರದ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಧಿವೇಶನದಲ್ಲಿ ದೇಶದ 15 ರಾಜ್ಯಗಳಿಂದ ಆಗಮಿಸಿದ 100ಕ್ಕೂ ಹೆಚ್ಚು ಸಾಹಿತಿಗಳು, ಹಿಂದಿ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಸಂಶೋಧಕರು, ಕವಿಗಳು ಹಾಗೂ ಸಮಾಜಸೇವಕರು ಭಾಗವಹಿಸಿದ್ದರು. ನೇಪಾಳದ ಹಿಂದಿ ವಿದ್ವಾಂಸರ ಆನ್ಲೈನ್ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮೆರುಗು ನೀಡಿತು. ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಹಿಂದಿ ಶಿಕ್ಷಕರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಗುರ್ಬಾಣಿ ಪಠಣ, ಕರ್ನಾಟಕದ ನಾಡಗೀತೆ ಹಾಗೂ ಸರಸ್ವತಿ ವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಗಣ್ಯರು ಹಾಗೂ ಆಯೋಜನಾ ಪ್ರಭಾರಿ ಡಾ. ರಂಜಿತ್ ಸಿಂಗ್ ಅರೋರಾ ಅರ್ಷ್ ಅವರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಅಧಿವೇಶನ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳ ಸ್ವಾಗತ ನೃತ್ಯ ಸಭಾಂಗಣದಲ್ಲಿ ಸಂಭ್ರಮದ ವಾತಾವರಣ ಮೂಡಿಸಿತು.
ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಮುಖ್ಯ ಅತಿಥಿಯಾಗಿ, ಗುರುನಾನಕ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ವಿಶೇಷ ಅತಿಥಿಯಾಗಿ ಹಾಗೂ ಗುರುದ್ವಾರ ಶ್ರೀ ನಾನಕ್ ಝೀರಾ ಸಾಹಿಬ್ ಅಧ್ಯಕ್ಷ ಡಾ. ಬಲ್ಬೀರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ರಾಮಟೇಕೆ, ಕಾರ್ಯದರ್ಶಿ ಡಾ. ಗೋಖಲೇಶ್ವರ ಕುಮಾರ ದ್ವಿವೇದಿ ಹಾಗೂ ಆಯೋಜನಾ ಸಹಪ್ರಭಾರಿ ಡಾ. ಸುಮಾ ಟಿ.ಆರ್. ವೇದಿಕೆಯಲ್ಲಿದ್ದರು. ಮಂಗಳೂರಿನ ಶ್ರವ್ಯಾ ಎನ್. ಕಾರ್ಯಕ್ರಮ ನಿರೂಪಿಸಿದರು.
ಆಯೋಜನಾ ಪ್ರಭಾರಿ ಡಾ. ರಂಜಿತ್ ಸಿಂಗ್ ಅರೋರಾ ಅರ್ಷ್ ಅವರು ಮುಖ್ಯ ಅತಿಥಿ ಸಂತೋಷ್ ಕುಮಾರ್ ಝಾ ಅವರ ಆಡಳಿತಾತ್ಮಕ, ಸಾಹಿತ್ಯಿಕ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಪರಿಚಯಿಸಿದರು. ಪ್ರೊ. ಡಾ. ಭರತ್ ಶೆಣ್ಕರ್ ಸ್ವಾಗತಿಸಿದರು. ಡಾ. ಬಲ್ಬೀರ್ ಸಿಂಗ್ ಅವರ ಪರಿಚಯವನ್ನು ಡಾ. ಕೃಷ್ಣಮಣಿಶ್ರೀ ಮಾಡಿದರು. ಲಕ್ಷ್ಮೀಕಾಂತ ವೈಷ್ಣವ ಸ್ವಾಗತಿಸಿದರು. ಡಾ. ರೇಷ್ಮಾ ಕೌರ್ ಅವರ ಪರಿಚಯವನ್ನು ದೀನಬಂಧು ಆರ್ಯ ಮಾಡಿದರು. ಡಾ. ಮುಕ್ತಾ ಕೌಶಿಕ್ ಸ್ವಾಗತಿಸಿದರು.
ಆಯೋಜನಾ ಉಪ ಸಹಪ್ರಭಾರಿ ಡಾ. ಹೇಮಾ ಸುಲ್ತಾನಪುರೇ ಸ್ವಾಗತ ಭಾಷಣ ಮಾಡಿದರು. ಪ್ರೊಜೆಕ್ಟರ್ ಮೂಲಕ ಸಂಸ್ಥೆಯ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ನೀಡಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಡಾ. ಗೋಖಲೇಶ್ವರ ಕುಮಾರ ದ್ವಿವೇದಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಾಹಿತ್ಯಿಕ ಪಯಣ, ಉದ್ದೇಶಗಳು ಹಾಗೂ ಹಿಂದಿ ಭಾಷೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಕೈಗೊಂಡಿರುವ ಕಾರ್ಯಗಳ ಕುರಿತು ವಿವರಿಸಿದರು. ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಸಾಹಿತ್ಯಿಕ ಸಂವಾದ ಬೆಳೆಸುವುದು, ಸಾಹಿತ್ಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಹಾಗೂ ಹಿಂದಿ ಸೇವೆಯಲ್ಲಿ ಯುವ ಪೀಳಿಗೆಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿ ಸಂತೋಷ್ ಕುಮಾರ್ ಝಾ ಮಾತನಾಡಿ, ಹಿಂದಿ ಭಾಷೆ ಮತ್ತು ಸಾಹಿತ್ಯದ ಸಂರಕ್ಷಣೆ, ಸಂವರ್ಧನೆ ಹಾಗೂ ಪ್ರಚಾರಕ್ಕಾಗಿ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥೆ ಮಾಡುತ್ತಿರುವ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಹಿಂದಿ ಕೇವಲ ಅಭಿವ್ಯಕ್ತಿಯ ಭಾಷೆಯಲ್ಲ; ದೇಶದ ವಿವಿಧ ಭಾಷಾ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಆತ್ಮೀಯತೆಯ ಬಂಧದಲ್ಲಿ ಬೆಸೆಯುವ ಶಕ್ತಿಯುತ ಮಾಧ್ಯಮವಾಗಿದೆ. ಭಾರತದ ಭಾಷಾ ವೈವಿಧ್ಯ ಸಾಂಸ್ಕೃತಿಕ ಶ್ರೀಮಂತಿಕೆಯ ಸಂಕೇತವಾಗಿದ್ದು, ಭಾಷೆಗಳ ನಡುವಿನ ಸಾಹಿತ್ಯಿಕ ವಿನಿಮಯ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಬೀದರ್ನಲ್ಲಿ ಇಂತಹ ಅಧಿವೇಶನ ಆಯೋಜಿಸಿರುವುದು ಹಿಂದಿ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ಸಂಬಂಧವನ್ನು ಗಟ್ಟಿಗೊಳಿಸುವುದರ ಜತೆಗೆ ಸಾಹಿತಿಗಳು, ಶಿಕ್ಷಣ ತಜ್ಞರು ಮತ್ತು ಯುವ ಪೀಳಿಗೆಗೆ ವಿಚಾರ ವಿನಿಮಯದ ವೇದಿಕೆ ಒದಗಿಸುತ್ತದೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಾಹಿತ್ಯ ಅಧ್ಯಯನ ಮತ್ತು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.
ವಿಶೇಷ ಅತಿಥಿ ಡಾ. ರೇಷ್ಮಾ ಕೌರ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಹಿಂದಿ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಬೆಳವಣಿಗೆ ಹಾಗೂ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಗುರುನಾನಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ಗೌರವಯುತ ಸಾಹಿತ್ಯಿಕ ಕಾರ್ಯಕ್ರಮ ನಮ್ಮ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಭವಿಷ್ಯದಲ್ಲಿಯೂ ಭಾಷೆ, ಸಾಹಿತ್ಯ, ಶಿಕ್ಷಣ ಹಾಗೂ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಅಭಿವೃದ್ಧಿಗೆ ಸಂಸ್ಥೆಯ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಲ್ಬೀರ್ ಸಿಂಗ್ ಅವರು ವಿವಿಧ ರಾಜ್ಯಗಳಿಂದ ಆಗಮಿಸಿದ ಸಾಹಿತಿಗಳು, ಹಿಂದಿ ವಿದ್ವಾಂಸರು, ಶಿಕ್ಷಣ ತಜ್ಞರು ಹಾಗೂ ಸಂಶೋಧಕರನ್ನು ಅಭಿನಂದಿಸಿ, ಅಧಿವೇಶನದ ಆಯೋಜಕರು ಮತ್ತು ಸಹಯೋಗಿಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ನಾಲ್ಕು ಪ್ರಕಟಣೆಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಸಂಸ್ಥೆಯ ಹಿಂದಿ ಮಾಸಿಕ ಪತ್ರಿಕೆ ‘ವಿಶ್ವ ಸ್ನೇಹ ಸಮಾಜ’ದ ವಿಶೇಷ ಸಂಚಿಕೆ ಹಾಗೂ ಸ್ಮರಣ ಸಂಚಿಕೆ, ಡಾ. ಗೋಖಲೇಶ್ವರ ಕುಮಾರ ದ್ವಿವೇದಿ ಸಂಪಾದಿಸಿರುವ ‘ಹಿಂದಿ ಸಾಹಿತ್ಯ ಮೇಂ ಆದಿವಾಸಿ ವಿಮರ್ಶ್’ ಸಂಶೋಧನಾ ಲೇಖನ ಸಂಕಲನ ಹಾಗೂ ಅವರು ರಚಿಸಿರುವ ‘ಸಂಸ್ಕಾರ ಗುರು ಕಿ ಪಾಠಶಾಲಾ’ ಪ್ರಶ್ನೋತ್ತರ ಕೃತಿ ಬಿಡುಗಡೆಗೊಂಡವು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಆಯೋಜನಾ ಪ್ರಭಾರಿ, ಲೇಖಕ ಹಾಗೂ ಇತಿಹಾಸ ಅಧ್ಯಯನಕಾರ ಡಾ. ರಂಜಿತ್ ಸಿಂಗ್ ಅರೋರಾ ಅರ್ಷ್ ರಚಿಸಿ, ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿರುವ ‘ಬೀದರ್: ಸಿಖ್ ಇತಿಹಾಸ್ ಕಾ ಸ್ವರ್ಣಿಮ್ ಅಧ್ಯಾಯ್’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ಈ ಕೃತಿಯಲ್ಲಿ ಶ್ರೀ ಗುರು ನಾನಕ್ ದೇವ್ ಸಾಹಿಬ್ ಅವರಿಗೆ ಸಂಬಂಧಿಸಿದ ಬೀದರ್ನ ಐತಿಹಾಸಿಕ ನೆನಪುಗಳು, ಪಂಚ ಪ್ಯಾರೆಯವರಲ್ಲಿ ಒಬ್ಬರಾದ ಭಾಯಿ ಸಾಹಿಬ್ ಸಿಂಗ್ ಅವರ ಜನ್ಮಸ್ಥಳ, ಮೈ ಭಾಗೋ ಅವರ ತಪಸ್ಸು ಮತ್ತು ಸಾಧನೆಯ ಪರಂಪರೆ ಹಾಗೂ ಗುರುದ್ವಾರ ಶ್ರೀ ನಾನಕ್ ಝೀರಾ ಸಾಹಿಬ್ನ ಐತಿಹಾಸಿಕ ಹಿನ್ನೆಲೆಯನ್ನು ಹಿಂದಿ ಓದುಗರಿಗೆ ಪರಿಚಯಿಸುವ ಮಹತ್ವದ ಪ್ರಯತ್ನ ಮಾಡಲಾಗಿದೆ.
ಉದ್ಘಾಟನಾ ಅಧಿವೇಶನದ ಕೊನೆಯಲ್ಲಿ ರಾಮಕೃಷ್ಣ ಕೆ.ಎಸ್. ವಂದಿಸಿದರು.
ಮೊದಲ ದಿನದ ಎರಡನೇ ಅಧಿವೇಶನದಲ್ಲಿ ‘ದಕ್ಷಿಣ ಭಾರತದ ಭಾಷೆಗಳು ಮತ್ತು ಹಿಂದಿಯೊಂದಿಗೆ ಅವುಗಳ ಆಂತರಿಕ ಸಂಬಂಧ’ ವಿಷಯದ ಕುರಿತು ಅಂತರರಾಷ್ಟ್ರೀಯ ವಿಚಾರಗೋಷ್ಠಿ ಹಾಗೂ ಸಂಶೋಧನಾ ಪ್ರಬಂಧ ಮಂಡನೆ ನಡೆಯಿತು.
ಸಂಸ್ಥೆಯ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ರಾಮಟೇಕೆ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಡಾ. ಕೃಷ್ಣಮಣಿಶ್ರೀ ನಿರೂಪಿಸಿದರು. ಮಹಾರಾಷ್ಟ್ರದ ಡಾ. ದೇವಿದಾಸ್ ಕೆ. ಬಾಮಣೆ ‘ಸಂಘರ್ಷ’ ಸ್ವಾಗತ ಭಾಷಣ ಮಾಡಿದರು.
ನೇಪಾಳದ ಕಾಠ್ಮಂಡುವಿನ ಕೀರ್ತಿಪುರದಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಕೇಂದ್ರ ಹಿಂದಿ ವಿಭಾಗದ ಡಾ. ಶ್ವೇತಾ ದೀಪ್ತಿ ಆನ್ಲೈನ್ ಮೂಲಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಪ್ರಸ್ತುತ ಕಾಲದಲ್ಲಿ ಗುರು ನಾನಕರ ವಿಚಾರಗಳ ಪ್ರಸ್ತುತತೆ: ಮಾನವೀಯತೆ, ಸಮಾನತೆ ಮತ್ತು ಸೌಹಾರ್ದದ ಶಾಶ್ವತ ಸಂದೇಶ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಗುರು ನಾನಕ್ ದೇವ್ ಅವರ ಮಾನವೀಯ ಚಿಂತನೆ, ಸಮಾನತೆ, ಸಾಮಾಜಿಕ ಸಾಮರಸ್ಯ ಹಾಗೂ ವಿಶ್ವ ಸಹೋದರತ್ವದ ಸಂದೇಶ ಇಂದಿನ ಜಾಗತಿಕ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ವಿವರಿಸಿದರು.
ಸೋಲಾಪುರದ ಹರಿಭಾಯಿ ದೇವಕರಣ ಮಹಾವಿದ್ಯಾಲಯದ ಹಿಂದಿ ವಿಭಾಗದ ಡಾ. ಧನ್ಯಕುಮಾರ ಬಿರಾಜದಾರ ಅವರು ‘ದಕ್ಷಿಣ ಭಾರತೀಯ ಸಂತ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿ, ದಕ್ಷಿಣ ಭಾರತದ ಶ್ರೀಮಂತ ಸಂತ ಸಾಹಿತ್ಯ ಪರಂಪರೆ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತನೆ ಮತ್ತು ಭಾರತೀಯ ಸಾಹಿತ್ಯ ಪ್ರಜ್ಞೆಯ ಬೆಳವಣಿಗೆಯಲ್ಲಿ ಅದರ ಕೊಡುಗೆಯನ್ನು ವಿವರಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರಾಧ್ಯಾಪಕಿ ಡಾ. ನಾಗರತ್ನ ಎನ್. ರಾವ್ ಅವರು ‘ಹಿಂದಿ ಸಾಹಿತ್ಯದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ’ ವಿಷಯದ ಕುರಿತು ಮಾತನಾಡಿ, ಹಿಂದಿ ಅಧ್ಯಯನ, ಬೋಧನೆ, ಸಾಹಿತ್ಯ ರಚನೆ, ಸಂಶೋಧನೆ, ಅನುವಾದ ಹಾಗೂ ಪ್ರಚಾರದಲ್ಲಿ ಕರ್ನಾಟಕದ ಸಾಹಿತ್ಯಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಪಾತ್ರವನ್ನು ವಿವರಿಸಿದರು.
ವಿವಿಧ ರಾಜ್ಯಗಳಿಂದ ಆಗಮಿಸಿದ ಸಂಶೋಧಕರು, ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಡಾ. ವಿಜಯಲಕ್ಷ್ಮಿ ರಾಮಟೇಕೆ ಭಾರತೀಯ ಭಾಷೆಗಳ ನಡುವೆ ಸಾಹಿತ್ಯಿಕ ಸಂವಾದ, ಸಂಶೋಧನೆ, ಅನುವಾದ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ನಿರಂತರವಾಗಿ ಪ್ರೋತ್ಸಾಹಿಸುವ ಅಗತ್ಯವನ್ನು ಪ್ರತಿಪಾದಿಸಿದರು. ದೀನಬಂಧು ಆರ್ಯ ವಂದಿಸಿದರು.
ಮೊದಲ ದಿನದ ಮೂರನೇ ಅಧಿವೇಶನದಲ್ಲಿ ಸಂಜೆ ಸಂಸ್ಥೆಯ ಸಾಮಾನ್ಯ ಸಭೆ ಡಾ. ವಿಜಯಲಕ್ಷ್ಮಿ ರಾಮಟೇಕೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಗೋಖಲೇಶ್ವರ ಕುಮಾರ ದ್ವಿವೇದಿ ಅವರ ನಿರೂಪಣೆಯಲ್ಲಿ ನಡೆಯಿತು.
ಸಭೆಯಲ್ಲಿ ಹಿಂದಿನ ನಿರ್ಣಯಗಳ ದೃಢೀಕರಣ, ಮುಂದಿನ ಅಧಿವೇಶನಗಳ ಆಯೋಜನೆ, ಸಾಹಿತ್ಯಿಕ ಚಟುವಟಿಕೆಗಳ ವಿಸ್ತರಣೆ ಹಾಗೂ ಭವಿಷ್ಯದ ಸಂಘಟನಾ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ವಿವಿಧ ರಾಜ್ಯಗಳ ಪ್ರತಿನಿಧಿಗಳು ತಮ್ಮ ಸಲಹೆಗಳನ್ನು ಮಂಡಿಸಿದರು.




















