Home ಜಿಲ್ಲೆ ಕಲಬುರಗಿ ಬಾಲ್ಯ ವಿವಾಹ ಮಕ್ಕಳ ಹಕ್ಕುಗಳ ಉಲ್ಲಂಘನೆ, ಗಂಭೀರ ದುಷ್ಪರಿಣಾಮ

ಬಾಲ್ಯ ವಿವಾಹ ಮಕ್ಕಳ ಹಕ್ಕುಗಳ ಉಲ್ಲಂಘನೆ, ಗಂಭೀರ ದುಷ್ಪರಿಣಾಮ

ಕಲಬುರಗಿ: ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅದು ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಬಾಲ್ಯ ವಿವಾಹವು ಎಂದಿಗೂ ಕೂಡಾ ಜರುಗಬಾರದು ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ನ್ಯೂ ಗೋವಾ ಹೋಟೆಲ್ ಹತ್ತಿರದ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಅಂತಾರಾಷ್ಟಿçÃಯ ಬಾಲ್ಯ ವಿವಾಹ ವಿರೋಧಿ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಕಂಡುಬರುತ್ತದೆ. ಗರ್ಭಕೋಶ ಪೂರ್ಣವಾಗಿ ಬೆಳವಣಿಗೆ ಆಗುವ ಮೊದಲೇ ಗರ್ಭಧಾರಣೆಯಾದರೆ, ಕಷ್ಟಕರ ಹೆರಿಗೆ, ಅತಿಯಾದ ರಕ್ತಸ್ರಾವ ಮತ್ತು ತಾಯಿ-ಮಗುವಿನ ಜೀವಕ್ಕೆ ಅಪಾಯ ಉಂಟಾಗುತ್ತದೆ. ಅಕಾಲಿಕ ಹೆರಿಗೆಯಿಂದ ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆ ಅಥವಾ ಕಡಿಮೆ ತೂಕದ ಸಮಸ್ಯೆ ಕಾಣಿಸಿಕೊಳ್ಳಬಹುದು. ವಯಸ್ಸಿಗೆ ಮೀರಿದ ಜವಾಬ್ದಾರಿ ಮತ್ತು ಹೊಸ ಪರಿಸರದಿಂದ ಮಕ್ಕಳಲ್ಲಿ ಖಿನ್ನತೆ, ಆತಂಕ ಹಾಗೂ ಭಯಭೀತ ವಾತಾವರಣ ಮೂಡುತ್ತದೆ. ಮಾನಸಿಕ ಸ್ಥೆöರ್ಯೈ ಕಳೆದುಕೊಂಡು, ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಮದುವೆಯ ನಂತರ ಶಾಲಾ-ಕಾಲೇಜು ಶಿಕ್ಷಣ ಮೊಟಕುಗೊಳ್ಳುತ್ತದೆ. ಕೌಶಲ್ಯ ಮತ್ತು ಶಿಕ್ಷಣದ ಕೊರತೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಷ್ಟವಾಗಿ, ಬಡತನ ಮುಂದುವರಿಯುತ್ತದೆ. ಪ್ರಬುದ್ಧತೆಯ ಕೊರತೆಯಿಂದ ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದೆ ಕೌಟುಂಬಿಕ ಹಿಂಸೆ ಅಥವಾ ವಿಚ್ಛೇದನದಂತಹ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ಬಾಲ್ಯ ವಿವಾಹ ತಡಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಬಾಲ್ಯ ವಿವಾಹ ಮಾಡುವುದು, ಪ್ರೋತ್ಸಾಹಿಸುವುದು ಅಥವಾ ಅದರಲ್ಲಿ ಭಾಗವಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1ಲಕ್ಷದವರೆಗೆ ದಂಡ ವಿಧಿಸಬಹುದು. ಗ್ರಾಮ ಪಂಚಾಯತಿ ಮಟ್ಟದ ಪಿಡಿಓ, ಶಿಕ್ಷಕರು, ಪೊಲೀಸರು ಮತ್ತು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ವಿವಾಹದ ಮಾಹಿತಿ ನೀಡುವುದು ಹಾಗೂ ಅಗತ್ಯವಿದ್ದಾಗ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವುದಾಗಿದೆ. ಬಾಲ್ಯ ವಿವಾಹದ ಸಂಭವ ಕಂಡುಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ-1098 ಅಥವಾ ಮಹಿಳಾ ಸಹಾಯವಾಣಿ-181ಗೆ ಮಾಹಿತಿ ನೀಡುವುದು. ಹೆಣ್ಣುಮಕ್ಕಳು ಮತ್ತು ಬಾಲಕರ ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುವುದು ಮತ್ತು ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಗುರುತಿಸುವುದು. ಮಕ್ಕಳಿಗೆ ಜೀವನ ಕೌಶಲ್ಯ, ತಮ್ಮ ಹಕ್ಕುಗಳ ಬಗ್ಗೆ ಅರಿವು ಮತ್ತು ವೃತ್ತಿಪರ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿಸುವುದು. ಬಡತನದಿಂದಾಗಿ ಮಕ್ಕಳ ಮದುವೆ ಮಾಡುವ ಕುಟುಂಬಗಳಿಗೆ ಶಿಕ್ಷಣ ಪ್ರೋತ್ಸಾಹಧನ, ವಿದ್ಯಾರ್ಥಿವೇತನ ಅಥವಾ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವುದು. ಪೋಷಕರು, ಧಾರ್ಮಿಕ ಹಾಗೂ ಸಮುದಾಯದ ಮುಖಂಡರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇನ್ನಿತರರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬಾಲ್ಯವಿವಾಹವನ್ನು ತಡೆಗಟ್ಟಬಹುದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಹಾಗೂ ವಿದ್ಯಾರ್ಥಿಗಳಿದ್ದರು.