
ಆಳಂದ: ತಾಲೂಕಿನ ಮಂಟಕಿ ತಾಂಡಾದಲ್ಲಿ ಕುಟುಂಬ ಕಲಹದ ನಡುವೆ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ತಂದೆ-ಮಗಳು ಮೃತಪಟ್ಟಿದ್ದ ದುರಂತ ಘಟನೆಗೆ ಇದೀಗ ಮತ್ತೊಂದು ಸಾವು ಸೇರ್ಪಡೆಯಾಗಿದೆ.
ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಕಲಬುರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಲಾಲ ಬಿಳಿರಾಮ ರಾಠೋಡ ಅವರ ಹಿರಿಯ ಪುತ್ರ ವಿತೇಶ ಶಿವಲಾಲ ರಾಠೋಡ (17) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆ.11ರಂದು ನಡೆದ ಸ್ಫೋಟದಲ್ಲಿ ಮಾಡಿಯಾಳ ತಾಂಡಾದ ಶಿವಲಾಲ ಬಿಳಿರಾಮ ರಾಠೋಡ (49) ಹಾಗೂ ಅವರ ಪುತ್ರಿ ಮೀರಾಬಾಯಿ ಶಿವಲಾಲ ರಾಠೋಡ (15) ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ಶಿವಲಾಲ ಅವರ ಪತ್ನಿ ಸವಿತಾ ಶಿವಲಾಲ ರಾಠೋಡ, ಪುತ್ರರಾದ ವಿತೇಶ ಹಾಗೂ ಮತ್ತೊಬ್ಬ ಪುತ್ರ, ಅಲ್ಲದೆ, ಸವಿತಾ ಅವರ ಸಂಬಂಧಿಕರಾದ ಸೂರೆಖಾ ಕೃಷ್ಣಾ ಚವ್ಹಾಣ ಮತ್ತು ಅವರ ಪುತ್ರ ವಿವೇಕ ಚವ್ಹಾಣ ಗಂಭೀರವಾಗಿ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡಿದ್ದ ವಿತೇಶನನ್ನು ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಒಂದು ವಾರದ ಚಿಕಿತ್ಸೆ ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಮಂಗಳವಾರ ಮೃತಪಟ್ಟಿದ್ದಾನೆ. ಇದರಿಂದ ಒಂದೇ ಕುಟುಂಬದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಸ್ಫೋಟದ ಬಳಿಕ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ಶಿವಲಾಲನ ಇನ್ನೊಬ್ಬ ಪುತ್ರನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎನ್ನಲಾಗಿದೆ. ಆದರೆ ಪತ್ನಿ ಸವಿತಾ ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿರುವುದು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಸೇರಿದಂತೆ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು.
ಒಂದೇ ಕುಟುಂಬದ ತಂದೆ, ಮಗಳು ಹಾಗೂ ಇದೀಗ ಪುತ್ರನನ್ನು ಬಲಿ ಪಡೆದಿರುವ ಈ ದುರಂತದಿಂದ ಮಂಟಕಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ನಿಖರ ಕಾರಣ ಹಾಗೂ ಜಿಲೆಟಿನ್ ಕಡ್ಡಿಗಳು ಮನೆಗೆ ಹೇಗೆ ಬಂದವು ಎಂಬ ಕುರಿತು ಪೆÇಲೀಸ್ ತನಿಖೆ ಮುಂದುವರಿದಿದೆ.





























