
ಕಲಬುರಗಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) 71ನೇ ವಾರ್ಷಿಕೋತ್ಸವದ ಅಂಗವಾಗಿ ಎಸ್‍ಬಿಐ ಬ್ಯಾಂಕ್ ಹಾಗೂ ಮಾರ್ಗದರ್ಶಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಿಶೋರಿಯರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ನಗರದ ಸೂಪರ್ ಮಾರ್ಕೆಟ್ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಿಲೇ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ಮತ್ತು ಒ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣಕುಮಾರ್ ಬಿ. ಪ್ರಭು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್‍ಬಿಐ ಪ್ರಾಂತೀಯ ವ್ಯವಸ್ಥಾಪಕರಾದ ಅನಿಲ್, ಎಸ್‍ಬಿಐ ಮುಖ್ಯ ಕಚೇರಿಯ ಸುದೀಪ್ ಕುಮಾರ್, ಎಚ್.ಆರ್. ಮ್ಯಾನೇಜರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುಳಾ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿನಿಧಿಗಳು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮನೋಹರ್ ಕುಮಾರಿ ಎಲ್ಲೂಭಾಯಿ, ಶ್ರೀದೇವಿ ಕಟ್ಟಿಮನಿ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದ್ ರಾಜ್, ಯಾವುದೇ ಹೆಣ್ಣು ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಈ ಸೈಕಲ್‍ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಗೆ ಹೋಗಲು ಸಾರಿಗೆ ಸೌಲಭ್ಯಗಳ ಕೊರತೆ ಇರುವ ಗ್ರಾಮೀಣ ಭಾಗದ ಬಾಲಕಿಯರಿಗೆ ಅನುಕೂಲವಾಗುವಂತೆ ಸೈಕಲ್‍ಗಳನ್ನು ನೀಡಲಾಗುತ್ತಿದ್ದು, ಬಾಲಕಿಯರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಹಾಗೂ ಬಾಲ್ಯ ವಿವಾಹ ಮತ್ತು ದೌರ್ಜನ್ಯಗಳಿಂದ ದೂರ ಉಳಿಯಬೇಕು ಎಂಬ ಸಾಮಾಜಿಕ ಕಾಳಜಿಯೂ ಈ ಯೋಜನೆಯ ಹಿಂದಿದೆ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕೃಷ್ಣಕುಮಾರ್ ಬಿ. ಪ್ರಭು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮೂರು ಅಂಶಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದರು. ಮೊದಲನೆಯದಾಗಿ ಪ್ರತಿಯೊಬ್ಬ ಮಗುವೂ ಶಿಕ್ಷಣ ಪಡೆಯಬೇಕು, ಎರಡನೆಯದಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಮೂರನೆಯದಾಗಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಆದರ್ಶ ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉದ್ಘಾಟನಾ ಭಾಷಣ ಮಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ್ ನವಿಲೇ, ಮಕ್ಕಳು ಗೌರವಯುತ ಜೀವನ ನಡೆಸಲು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. “ಏನಾದರೂ ಆಗಲಿ, ಮೊದಲು ಮಾನವರಾಗಿರಿ” ಎಂಬ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಉಲ್ಲೇಖಿಸಿದ ಅವರು, ಉತ್ತಮ ತಿಳುವಳಿಕೆ, ಆಧ್ಯಾತ್ಮಿಕತೆ ಹಾಗೂ ಸಂಸ್ಕಾರಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಎಸ್‍ಬಿಐ ಬ್ಯಾಂಕ್ ಹಾಗೂ ಮಾರ್ಗದರ್ಶಿ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುತ್ತಿರುವ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಕಿಶೋರಿಯರಿಗೆ ಉಚಿತ ಸೈಕಲ್‍ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರು, ಶಿಕ್ಷಕರು, ಪೆÇೀಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





























