
ಹೈದರಾಬಾದ್/ನವದೆಹಲಿ.ಜು.೩೧: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ತಿರುಚಲಾದ (ಮಾರ್ಫ್ಡ್) ವೀಡಿಯೊ ಮತ್ತು ಚಿತ್ರಗಳನ್ನು ಹಂಚಿಕೊಂಡ ಆರೋಪದ ಮೇಲೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಾಲೀಕತ್ವದ ’ಮೆಟಾ’ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ’ಕಾಕೂರೋಚ್ ಜನತಾ ಪಾರ್ಟಿ’ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿಯವರನ್ನು ನಿಂದಿಸುವ ಹಾಗೂ ಸಾರ್ವಜನಿಕರಲ್ಲಿ ದ್ವೇಷ ಪ್ರಚೋದಿಸುವ ರೀತಿಯಲ್ಲಿ ವಿಡಿಯೋ ಮತ್ತು ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.
ಇಬ್ಬರಿಂದ ದೂರು ಸಲ್ಲಿಕೆಈ ಸಂಬಂಧ ಎಸ್. ಅರವಿಂದ್ ರೆಡ್ಡಿ ಹಾಗೂ ತೆಲಂಗಾಣ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯ ಟಿ. ಸಾಯಿಕಿರಣ್ ಗೌಡ್ ಎಂಬುವವರು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.
ದೂರುದಾರರು ನೀಡಿರುವ ವಿವರಣೆಯ ಪ್ರಕಾರ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳನ್ನು ಅಶ್ಲೀಲ ಹಾಗೂ ವಿಕೃತ ರೀತಿಯಲ್ಲಿ ತಿದ್ದಿ ಪ್ರಸಾರ ಮಾಡಲಾಗಿದೆ.
ಇಂತಹ ಪೋಸ್ಟ್‌ಗಳು ದೇಶದ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಬಿಎನ್‌ಎಸ್ ಹಾಗೂ ಐಟಿ ಕಾಯ್ದೆಯಡಿ ಕೇಸ್ದೂರಿನ ಆಧಾರದ ಮೇಲೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ ೬೬-ಸಿ (ಗುರುತು ಕಳುವು) ಹಾಗೂ ಸೆಕ್ಷನ್ ೬೭ (ಇಂಟರ್ನೆಟ್‌ನಲ್ಲಿ ಆಕ್ಷೇಪಾರ್ಹ ವಿಷಯ ಪ್ರಕಟಣೆ)ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೩೫೩(೨) (ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ) ಹಾಗೂ ಸೆಕ್ಷನ್ ೩೩೬(೪) (ವ್ಯಕ್ತಿತ್ವಕ್ಕೆ ಧಕ್ಕೆ ತರುವ ನಕಲಿ ದಾಖಲೆ ಸೃಷ್ಟಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಖಾತೆದಾರರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

































