
ಕೋಲಾರ, ಜು,೨೯-ಕಂದಾಯ ಮತ್ತು ಸರ್ವೆ ಇಲಾಖೆಗಳಲ್ಲಿ ೨೦೦೧ ರಿಂದ ೨೦೨೪ರವರೆಗಿನ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ನಕಲಿ ಖಾತೆ ಸೃಷ್ಟಿ ಹಾಗೂ ಸರ್ಕಾರಿ ಕಡತಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. ಈ ಬಹುಕೋಟಿ ಬೆಲೆಯ ಜಮೀನುಗಳ ನಕಲಿ ದಾಖಲೆ ದಂಧೆಯಲ್ಲಿ ಒಟ್ಟು ೨೯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವುದನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಪೈಕಿ ಮೂವರನ್ನು ಅಮಾನತುಗೊಳಿಸಲಾಗಿದೆ. ಅಚ್ಚರಿಯೆಂದರೆ, ಪ್ರಕರಣದ ಮಾಹಿತಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಕೋಲಾರ ಹಾಗೂ ಮಾಲೂರು ತಹಶೀಲ್ದಾರ್‌ಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಹಗರಣದ ಕುರಿತು ಅವರು ತಿಳಿಸಿ, “ಸೋಮವಾರವಷ ನಾನು ಖುದ್ದಾಗಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಪ್ರಕರಣದ (ದೂರು ಸಂಖ್ಯೆ: ೭೨೪/೨೦೨೫,ARE-೧೫) ಸಂಪೂರ್ಣ ತನಿಖಾ ವರದಿಯನ್ನು ಸಲ್ಲಿಸಿದ್ದೇನೆ” ಎಂದು ಸ್ಪಷಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತಗಳ ನಾಪತ್ತೆ ಹಾಗೂ ನಕಲಿ ದಾಖಲೆ ಸೃಷ್ಟಿಯಾಗಿರುವ ಬಗ್ಗೆ ವರದಿ ನೀಡುವಂತೆ ಕೋಲಾರ ತಹಶೀಲ್ದಾರ್ ನಯನ ಹಾಗೂ ಮಾಲೂರು ತಹಶೀಲ್ದಾರ್ ರೂಪಾ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಇಬ್ಬರೂ ಅಧಿಕಾರಿಗಳು ನಿಗದಿತ ಸಮಯದೊಳಗೆ ವರದಿ ನೀಡದೆ ಕರ್ತವ್ಯಲೋಪವೆಸಗಿದ್ದಾರೆ. ಹೀಗಾಗಿ ಇವರಿಬ್ಬರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಹಗರಣದಲ್ಲಿ ಭಾಗಿಯಾಗಿರುವ ೨೯ ಮಂದಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರಮುಖರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ:
ಕಾಮಸಮುದ್ರಂ ವೃತ್ತದ ಕಂದಾಯ ನಿರೀಕ್ಷಕ ಜಮೀರ್ ಪಾಷ, ಮಾಲೂರು ವೃತ್ತದ ಕಂದಾಯ ನಿರೀಕ್ಷಕ ಬಿ.ವಿ. ಅರುಣ್ ಕುಮಾರ್ ಹಾಗೂ ಪ್ರಥಮ ದರ್ಜೆ ಸಹಾಯಕ ಕೆ. ರಾಮಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರಾಮ ಸಹಾಯಕ ರಾಮಕೃಷಪ್ಪ ಎಂಬುವವರನ್ನು ಸೇವೆಯಿಂದಲೇ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ದ್ವಿತೀಯ ದರ್ಜೆ ಸಹಾಯಕರಾಗಿದ್ದು, ಪ್ರಸ್ತುತ ಶಿರಸ್ತೇದಾರರಾಗಿ ಬಡ್ತಿ ಪಡೆದಿರುವ ಶಾಂತಮ್ಮ ಮತ್ತು ಭಾರತಿ ಅವರು ಸಹ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇವರನ್ನು ಅಮಾನತುಗೊಳಿಸುವ ಅಧಿಕಾರ ಪ್ರಾದೇಶಿಕ ಆಯುಕ್ತರಿಗೆ ಇರುವುದರಿಂದ, ಸೂಕ್ತ ಕ್ರಮಕ್ಕಾಗಿ ಆರ್‌ಸಿ ಅವರಿಗೆ ವರದಿ ಕಳುಹಿಸಲಾಗಿದೆ.
ಅಕ್ರಮದಲ್ಲಿ ಕಂದಾಯ ಇಲಾಖೆ ಜೊತೆಗೆ ಸರ್ವೆ ಇಲಾಖೆಯ ಪಾತ್ರವೂ ದೊಡ್ಡದಿದೆ. ಇಬ್ಬರು ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ೪ ಮಂದಿ ಸೂಪರ್‌ವೈಸರ್‌ಗಳು ಹಾಗೂ ೪ ಮಂದಿ ಸರ್ವೇಯರ್‌ಗಳು ಸೇರಿದಂತೆ ಒಟ್ಟು ೧೦ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವಂತೆ ಭೂಮಾಪನ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. (ಈ ೧೦ ಮಂದಿಯಲ್ಲಿ ೪ ಅಧಿಕಾರಿಗಳು ಕೋಲಾರದಲ್ಲೇ ಇದ್ದರೆ, ೬ ಮಂದಿ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ).
ಒಟ್ಟು ೨೯ ಜನರಲ್ಲಿ ಈ ಮೇಲಿನ ಅಧಿಕಾರಿಗಳನ್ನು ಹೊರತುಪಡಿಸಿ, ಇನ್ನು ೧೩ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇವರಲ್ಲಿ ಹಲವರು ನಿವೃತ್ತರಾಗಿದ್ದಾರೆ ಮತ್ತು ಕೆಲವರು ವರ್ಗಾವಣೆಯಾಗಿದ್ದಾರೆ. ಈ ೧೩ ಮಂದಿಯ ವಿರುದ್ಧ ದೋಷರೋಪಣಾ ಪಟ್ಟಿ ಸಿದ್ಧಪಡಿಸುವಂತೆ ತಹಶೀಲ್ದಾರ್‌ಗಳಿಗೆ ಗುರುವಾರದವರೆಗೆ ಗಡುವು ನೀಡಲಾಗಿದೆ. ವರದಿ ಬಂದ ತಕ್ಷಣವೇ ಅದನ್ನು ಲೋಕಾಯುಕ್ತಕ್ಕೆ ಪೂರಕ ವರದಿಯಾಗಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಭ್ರಷಚಾರಕ್ಕೆ ಡಿಜಿಟಲ್ ಬ್ರೇಕ್: ೨ ಕೋಟಿ ೭ ಲಕ್ಷ ಪುಟಗಳ ದಾಖಲೆ ಆನ್‌ಲೈನ್‌ಗೆ!
ಕಚೇರಿಗಳಲ್ಲಿ ಕಡತಗಳು ನಾಪತ್ತೆಯಾಗುವುದು, ಹರಿದುಹಾಕುವುದು ಹಾಗೂ ನಕಲಿ ಪುಟಗಳನ್ನು ಸೇರಿಸುವಂತಹ ದಂಧೆಗಳಿಗೆ ಶಾಶ್ವತ ಬ್ರೇಕ್ ಹಾಕಲು ಜಿಲ್ಲಾಡಳಿತ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.
“ಜಿಲ್ಲೆಯ ಎಲ್ಲಾ ಕಂದಾಯ ಕಚೇರಿಗಳ ಕಡತಗಳ ಕೊಠಡಿಯಲ್ಲಿನ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಬರೋಬ್ಬರಿ ೨ ಕೋಟಿ ೭ ಲಕ್ಷ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮುಗಿಸಲಾಗಿದೆ ಕೋಲಾರ, ಮಾಲೂರು, ಮುಳಬಾಗಿಲು, ಬಂಗಾರಪೇಟೆ ಸೇರಿದಂತೆ ಡಿಸಿ ಹಾಗೂ ಎಸಿ ಕಚೇರಿಗಳ ಕಡತಗಳ ಸ್ಕ್ಯಾನಿಂಗ್ ಪೂರ್ಣಗೊಂಡಿದೆ. ಶ್ರೀನಿವಾಸಪುರದಲ್ಲಿ ಮಾತ್ರ ೩.೫ ಲಕ್ಷ ಪುಟಗಳು ಬಾಕಿ ಇದ್ದು, ಆಗಸ್ಟ್ ೧೫ರೊಳಗೆ ಅದೂ ಪೂರ್ಣಗೊಳ್ಳಲಿದೆ” ಎಂದು ಡಿಸಿ ಮಾಹಿತಿ ನೀಡಿದರು.
ಈ ಡಿಜಿಟಲೀಕರಣದಿಂದಾಗಿ ಇನ್ಮುಂದೆ ಸಾರ್ವಜನಿಕರು ಯಾವುದೇ ದಾಖಲೆಗಳಿಗಾಗಿ ಅಧಿಕಾರಿಗಳ ಹಿಂದೆ ಅಲೆಯುವಂತಿಲ್ಲ. ಭೂ ಸುರಕ್ಷಾ ಅಡಿಯಲ್ಲಿ ವೆಬ್‌ಸೈಟ್ ಮೂಲಕವೇ ನೇರವಾಗಿ ದೃಢೀಕೃತ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಿಂದ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷಚಾರ ಹಾಗೂ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


































