
ವಿಜಯಪುರ, ಸೆ. 25: ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಿದಾಗ ಅದನ್ನು ಸಮಾಜದ ಗಮನಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ಸಮಾನತೆ ಕೇವಲ ಮಾತಿಗೆ ಸೀಮಿತವಾಗದೆ, ಜೀವನದಲ್ಲಿ ಪಾಲಿಸಬೇಕಾದ ಮೌಲ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ವಿಜಯಾ ಬಿ. ಕೊರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಸ್ನಾತಕ ವಿಭಾಗದ ಸಹಯೋಗದಲ್ಲಿ, ಬೆಂಗಳೂರಿನ ಗುಬ್ಬಿವಾಣಿ ಟ್ರಸ್ಟ್‍ನೊಂದಿಗೆ ಗುರುವಾರ ಆಯೋಜಿಸಿದ್ದ ‘ಅವಳ ಹೆಜ್ಜೆ ಕಿರುಚಿತ್ರ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಂಗ ಸಂವೇದನೆ ಹಾಗೂ ಮಹಿಳಾ ಸಬಲೀಕರಣದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮಹಿಳೆಯರನ್ನು ಪುರುಷರಷ್ಟೇ ಸಮರ್ಥವಾಗಿ ಕಾಣುವ ಮನೋಭಾವ ಸಮಾಜದಲ್ಲಿ ಬೆಳೆಸುವ ಅಗತ್ಯವಿದೆ. ಉನ್ನತ ಶಿಕ್ಷಣದ ಮೂಲಕ ಪಡೆದ ಜ್ಞಾನವನ್ನು ಕೇವಲ ತಲೆಯಲ್ಲಿಟ್ಟುಕೊಳ್ಳದೆ, ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದರು.
ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ಕಿರುಚಿತ್ರಗಳ ಮೂಲಕ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು. ಇಂತಹ ಸೃಜನಾತ್ಮಕ ಮಾಧ್ಯಮಗಳು ಮಹಿಳೆಯರ ಸಮಸ್ಯೆಗಳನ್ನು ಸಮಾಜದ ಮುಂದಿಡಲು ಪರಿಣಾಮಕಾರಿ ವೇದಿಕೆಯಾಗಬಲ್ಲವು ಎಂದು ಹೇಳಿದರು.
ಗುಬ್ಬಿವಾಣಿ ಟ್ರಸ್ಟ್‍ನ ‘ಅವಳ ಹೆಜ್ಜೆ’ ಕಾರ್ಯಕ್ರಮದ ನಿರ್ದೇಶಕಿ ಶಾಂತಲಾ ದಾಮ್ಲೆ ಮಾತನಾಡಿ, ಮಹಿಳಾ ಸಬಲೀಕರಣವೆಂದರೆ ಮಾನಸಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮಹಿಳೆಯರು ಸಬಲರಾಗುವುದಾಗಿದೆ. ಮಹಿಳೆಯರು ತಮ್ಮ ಅನುಭವ ಮತ್ತು ವಿಚಾರಗಳನ್ನು ಸ್ವತಃ ಹೇಳಿಕೊಳ್ಳಲು ಅವಕಾಶ ಕಲ್ಪಿಸುವುದು ಅಗತ್ಯ. ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ಹೆಚ್ಚಾಗಬೇಕು ಹಾಗೂ ಮಹಿಳೆಯರ ದೃಷ್ಟಿಕೋನದ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಬೇಕು ಎಂದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ತಾವು ಸಂಪಾದಿಸಿದ ಹಣವನ್ನು ತಮ್ಮ ನಿರ್ಧಾರದಂತೆ ಬಳಸುವ ಸ್ವಾತಂತ್ರ್ಯ ಹೊಂದಬೇಕು. ರಾಜಕೀಯ ಹಕ್ಕುಗಳು, ನೀತಿಗಳು ಹಾಗೂ ನಿರ್ಧಾರಗಳ ಕುರಿತು ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಬೇಕು. ಮಾನಸಿಕ ಧೈರ್ಯದ ಜೊತೆಗೆ ದೈಹಿಕ ಆರೋಗ್ಯ ಮತ್ತು ಶಕ್ತಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಇಂದಿನ ಸವಾಲುಗಳನ್ನು ಎದುರಿಸುವಂತೆ ಮಹಿಳೆಯರು ಸಕ್ರಿಯವಾಗಿ ಸಬಲರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಬ್ಬಿವಾಣಿ ಟ್ರಸ್ಟ್‍ನ ಔಟ್ರೀಚ್ ಸಂಯೋಜಕಿ ಉಷಾ ಸಂಪತ್ ಕುಮಾರ್, ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪೆÇ್ರ. ಡಿ.ಎಂ. ಮದರಿ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪೆÇ್ರ. ಓಂಕಾರ್ ಕಾಕಡೆ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪೆÇ್ರ. ಲಕ್ಷ್ಮೀದೇವಿ ವೈ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಭಾಗ್ಯಶ್ರೀ ದೊಡಮನಿ ಹಾಗೂ ಡಾ. ಸರೋಜಾ ಸಂತಿ ಅತಿಥಿಗಳನ್ನು ಪರಿಚಯಿಸಿದರು. ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಿರೂಪಿಸಿ, ವಂದಿಸಿದರು.























