Home Lead News ಸಭಾಧ್ಯಕ್ಷ-ಸಭಾಪತಿ ಆಯ್ಕೆ

ಸಭಾಧ್ಯಕ್ಷ-ಸಭಾಪತಿ ಆಯ್ಕೆ

ಬೆಂಗಳೂರು, ಆ. ೧೪- ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದ ಗೌಡ ಸಂಗನಗೌಡ ಪಾಟೀಲ (ಜಿ.ಎಸ್. ಪಾಟೀಲ್) ಹಾಗೂ ವಿಧಾನ ಪರಿಷತ್ತಿನ ಸಭಾಪತಿಯಾಗಿ ಸಲೀಂ ಅಹ್ಮದ್ ಅವರನ್ನು ಆಯ್ಕೆ ಮಾಡಲಾಯಿತು.


ವಿಧಾನಸಭೆಯಲ್ಲಿಂದು ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ಬಹಿಷ್ಕರಿಸಿದ್ದವು. ವಿಪಕ್ಷಗಳ ಬಹಿಷ್ಕಾರದ ನಡುವೆಯೇ ಗದಗ ಜಿಲ್ಲೆಯ ರೋಣಾ ಶಾಸಕರಾದ ಜಿ.ಎಸ್. ಪಾಟೀಲ್ ಅವರನ್ನು ವಿಧಾನಸಭೆಯನ್ನು ನೂತನ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.


ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದ ಕಲಾಪ ಪೂರ್ಣಗೊಂಡ ನಂತರ ಹಂಗಾಮಿ ಸಭಾಧ್ಯಕ್ಷ ಟಿ.ಬಿ. ಜಯಚಂದ್ರ ಅವರು ನೂತನ ಸಭಾಧ್ಯಕ್ಷರ ಆಯ್ಕೆ ಪ್ರಸ್ತಾವವನ್ನು ಮಂಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಸೂಚಿಸಿದರು. ಅದರಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಗುರುಪಾದಗೌಡ ಸಂಗನಗೌಡ ಪಾಟೀಲ ಅವರನ್ನು ವಿಧಾನಸಭೆಯ ನೂತನ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಮಂಡಿಸಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅನುಮೋದಿಸಿದರು. ಈ ಪ್ರಸ್ತಾಪಕ್ಕೆ ಸದನ ಧ್ವನಿಮತದಿಂದ ಒಪ್ಪಿಗೆ ನೀಡಿತು.


ಹಂಗಾಮಿ ಸಭಾಧ್ಯಕ್ಷ ಟಿ.ಬಿ. ಜಯಚಂದ್ರ ಅವರು ಗುರುಪಾದ ಗೌಡ ಸಂಗನಗೌಡ ಪಾಟೀಲ್ ಅವರು ನೂತನ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.


ಇದಾದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಇಬ್ಬರೂ ಗುರುಪಾದ ಗೌಡ ಸಂಗನಗೌಡ ಪಾಟೀಲ್ ಅವರು ಕುಳಿತ್ತಿದ್ದ ಆಸನದತ್ತ ತೆರಳಿ ಅವರನ್ನು ಕೈಹಿಡಿದು ವಿಧಾನಸಭಾಧ್ಯಕ್ಷರ ಪೀಠಕ್ಕೆ ಕರೆತಂದು ಕುಳ್ಳಿರಿಸಿದರು. ಆಗ ಇಡೀ ಸದನ ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿತು.


ಬಿಜೆಪಿ ಬಹಿಷ್ಕಾರ


ಸಾಂವಿಧಾನಿಕ ಹುದ್ದೆಯಾದ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಹೆಸರು ಅಂತಿಮಗೊಳಿಸಿ ಪಟ್ಟಿ ಕಳುಹಿಸಿರುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಹಿಷ್ಕರಿಸಿತ್ತು. ಹಾಗಾಗಿ ನೂತನ ಸಭಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಸದನಕ್ಕೆ ಗೈರು ಹಾಜರಾಗಿದ್ದರು.


ಜಿ.ಎಸ್. ಪಾಟೀಲ್ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನಕ್ಕೆ ಆಗಮಿಸಿದರು. ನಂತರ ಪ್ರತಿಪಕ್ಷ ನಾಯಕ ಆರ್, ಅಶೋಕ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಸನದಿಂದ ಕರೆತಂದು ಸಭಾಧ್ಯಕ್ಷರ ಪೀಠದಲ್ಲಿ ಕುಳ್ಳಿರಿಸಿದರು.


ನೂತನ ಸಭಾಧ್ಯಕ್ಷರಾಗಿ ಜಿ.ಎಸ್. ಪಾಟೀಲ್ ಅವರ ಪೀಠದಲ್ಲಿ ಆಸೀನರಾದ ನಂತರ ಅವರನ್ನು ಅಭಿನಂದಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್. ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಬಿಜೆಪಿಯ ಸಿ.ಸಿ. ಪಾಟೀಲ್, ಸಚಿವ ಯು.ಟಿ. ಖಾದರ್, ಬಿಜೆಪಿಯ ಸುನೀಲ್‌ಕುಮಾರ್, ಬಿ.ವೈ. ವಿಜಯೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಹಲವು ಸದಸ್ಯರು ಅಭಿನಂದನಾ ಭಾಷಣ ಮಾಡಿದರು.

ಮೇಲ್ಮನೆ ಸಭಾಪತಿಯಾಗಿ
ಸಲೀಂ ಅಹ್ಮದ್ ಆಯ್ಕೆ


ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್ ಮುಖಂಡ ಹಿರಿಯ ಸದಸ್ಯ ಸಲೀಂ ಅಹ್ಮದ್ ಅವರು ೮ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರ ೩೮ ಮತಗಳು ಚಲಾವಣೆಯಾದರೆ ಅವರ ಪ್ರತಿ ಸ್ಪರ್ಧಿ ಬಿಜೆಪಿಯ ಹಿರಿಯ ಪಿ.ಹೆಚ್.ಪೂಜಾರ್ ವಿರುದ್ಧ ೩೦ ಮತಗಳು ಚಲಾವಣೆಯಾಗಿದ್ದರಿಂದ ಸಲೀಂ ಅಹಮದ್ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸಭಾಪತಿ ಪುಟ್ಟಣ್ಣ ಪ್ರಕಟಿಸಿದರು.


ಇದಕ್ಕೂ ಮೊದಲು ಪೀಠ ದಲ್ಲಿದ್ದ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಸಭಾಪತಿ ಸ್ಥಾನಕ್ಕೆ ಪ್ರಕ್ರಿಯೆ ಕೈಗೊಂಡಾಗ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸಲೀಂ ಅಹ್ಮದ್ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು.


ಸಭಾನಾಯಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಸ್ತಾವವನ್ನು ಅನುಮೋದಿಸಿದರು. ಅದೇ ರೀತಿ, ಎನ್.ಎಸ್.ಬೋಸರಾಜು, ಮಂಜುನಾಥ ಭಂಡಾರಿ, ಎ.ನಾಗರಾಜು ಯಾದವ್, ಐವಾನ್ ಡಿಸೋಜಾ ಅವರ ಸಹ ಸಲೀಂ ಅಹ್ಮದ್ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು.


ಬಳಿಕ, ವಿನಯ್ ಕಾರ್ತಿಕ್ ಪ್ರಕಾಶ್, ವಸಂತ ಕುಮಾರ್, ಡಾ.ಡಿ.ತಿಮ್ಮಯ್ಯ, ಎಫ್.ಹೆಚ್.ಜಕ್ಕಪ್ಪ ನವರ್ ಅವರು ಪ್ರಸ್ತಾಪ ಅನುಮೋದಿಸಿದರು.ಇತ್ತ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪಿ.ಹೆಚ್ ಪೂಜಾರ್ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು. ಇದಕ್ಕೆ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಸ್ತಾಪವನ್ನು ಅನುಮೋದಿಸಿದರು.


ಹೀಗೆ ಸಭಾಪತಿ ಸ್ಥಾನಕ್ಕೆ ಏಳು ಪ್ರಸ್ತಾವಗಳು ಬಂದಿದ್ದವು. ಈ ಪೈಕಿ ಐದು ಪ್ರಸ್ತಾವಗಳು ಸಲೀಂ ಅಹ್ಮದ್ ಪರ ಬಂದಿದ್ದವು. ಬಳಿಕ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದರು.


ಧ್ವನಿಮತದ ಮೂಲಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಲೀಂ ಅಹ್ಮದ್ ಅವರ ಪರವಾಗಿ ಒಟ್ಟು ೩೮ ಮತಗಳು ಚಲಾವಣೆಯಾದರೆ, ವಿರುದ್ಧವಾಗಿ ೩೦ ಮತಗಳು ಬಿದ್ದಿವೆ. ಬಹುಮತ ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಸಲೀಂ ಅಹ್ಮದ್ ಅವರನ್ನು ವಿಧಾನಪರಿಷತ್‌ನ ನೂತನ ಸಭಾಪತಿಯಾಗಿ ಅಧಿಕೃತವಾಗಿ ಘೋಷಿಸಲಾಯಿತು.
ಬಳಿಕ ಸಭಾನಾಯಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,ಸದಸ್ಯರಾದ ಸಿ.ಟಿ.ರವಿ, ಬಿ.ಕೆ.ಹರಿಪ್ರಸಾದ್, ಭೋಜೇಗೌಡ,ಸಂಕನೂರು ಸೇರಿದಂತೆ ಪ್ರಮುಖರು ನೂತನ ಸಭಾಪತಿ ಸಲೀಂ ಅಹ್ಮದ್ ಅವರನ್ನು ಕರೆತಂದು ಪೀಠದಲ್ಲಿ ಕೂರಿಸಿ ಅಭಿನಂದಿಸಿದರು.

ಜಿ.ಎಸ್. ಪಾಟೀಲ್ ಅವರ ಪರಿಚಯ


ಗದಗ ಜಿಲ್ಲೆಯ ರೋಣಾದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಜಿ.ಎಸ್. ಪಾಟೀಲ್ ರವರು ೧೯೪೮ನೇ ಇಸವಿಯಲ್ಲಿ ಜನಿಸಿದ್ದು, ಇವರ ತಂದೆ ಸಂಗನಗೌಡ ರುದ್ರಗೌಡ ಪಾಟೀಲ್, ತಾಯಿ ಬಸಮ್ಮ ಸಂಗನಗೌಡ ಪಾಟೀಲ್.


ಧಾರವಾಡ ಸೆಂಟ್ ಜೋಸೆಫ್ ಹೈಸ್ಕೂಲ್ ಹಾಗೂ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿರುವ ಜಿ.ಎಸ್. ಪಾಟೀಲ್ ರವರು ಉತ್ತಮ ಕ್ರಿಡಾಪಟುವಾಗಿದ್ದು, ಮೈಸೂರು ಪ್ರಾಂತ್ಯದ ರಾಜ್ಯ ತಂಡದಲ್ಲಿ ಕ್ರಿಕೆಟಿಗರಾಗಿಯೂ ಆಟ ಆಡಿದ್ದಾರೆ.


೧೯೭೪ ರಲ್ಲಿ ಅನ್ನಪೂರ್ಣ ಅವರನ್ನು ವಿವಾಹವಾಗಿರುವ ಜಿ.ಎಸ್. ಪಾಟೀಲ್ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿಯರಿದ್ದು, ಹಿರಿಯ ಪುತ್ರ ಡಾ. ಪ್ರಶಾಂತ್ ವೈದ್ಯರಾಗಿದ್ದು, ದ್ವಿತೀಯ ಪುತ್ರ ಮಿಥುನ್ ಇಂಜಿನಿಯರ್ ಪದವೀಧರರು, ಪುತ್ರಿ ವರ್ಷ ಇದ್ದಾರೆ.


ಕೃಷಿ ಕುಟುಂಬದಿಂದ ಬಂದ ಸಂಗನಗೌಡ ಪಾಟೀಲ್ ಅವರ ಹಿರಿಯ ಸಹೋದರ ಆರ್.ಎಸ್. ಪಾಟೀಲ್ ಈ ಹಿಂದೆ ಬಾಗಲಕೋಟೆ ಲೋಕಸಭಾ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಹಾಗೂ ಇವರ ಸಹೋದರರಾದ ಜಿ.ಎಸ್. ಪಾಟೀಲ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಿರಿಯ ಸಹೋದರ ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇವರದ್ದು ಅವಿಭಕ್ತ ಕುಟುಂಬವಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಗಿರಿ ಮಕ್ಕಳು ಸೇರಿದಂತೆ ಸುಮಾರು ೧೫೦ ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬವಾಗಿದೆ.


ವಿಧಾನಸಭಾಧ್ಯಕ್ಷರಾಗಿರುವ ಜಿ.ಎಸ್. ಪಾಟೀಲ ಅವರು ಸಾರ್ವಜನಿಕ ಬದುಕಿಗೆ ಅಡಿ ಇಟ್ಟಿದ್ದು, ೧೯೮೩ರಲ್ಲಿ ರೋಣಾ ಪುರಸಭೆಗೆ ಆಯ್ಕೆಯಾಗಿದ್ದರು. ೧೯೮೯ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ನಂತರ ೧೯೯೪, ೯೯, ೨೦೦೪, ೨೦೦೮, ೨೦೧೩, ೨೦೧೮ ಮತ್ತು ೨೦೨೩ ರವರೆಗೆ ಕಾಂಗ್ರೆಸ್ ಪಕ್ಷದಿಂದ ೮ ಬಾರಿ ರೋಣಾ ಕ್ಷೇತ್ರದಿಂದ ಸ್ಪರ್ಧಿಸಿ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.


೨೦೦೧ ರಿಂದ ೨೦೦೩ ರವರೆಗೆ ಉಗ್ರಾಣ ನಿಗಮದ ಅಧ್ಯಕ್ಷರಾಗಿ, ೨೦೧೮ ರವರೆಗೆ ನವೀಕರಿಸಬಹುದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.