
ಬೆಂಗಳೂರು: ಜೂ. ೧೩-ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಇದೀಗ ನಿರಾಸೆಯ ಸುದ್ದಿ ಎದುರಾಗಿದೆ. ರಾಜ್ಯದಲ್ಲಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಿದರೂ, ಆರಂಭಿಕ ಚುರುಕಿನ ನಂತರ ಮಳೆಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿಯೂ ನಿರೀಕ್ಷೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ ೪ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಕಾರ್ಯಗಳಿಗೆ ಸಿದ್ಧತೆ ನಡೆಸಿದ್ದರು. ಆದರೆ ಮುಂಗಾರು ಆರಂಭವಾಗಿ ಕೇವಲ ಒಂದು ವಾರ ಕಳೆದಿದ್ದರೂ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಮಳೆ ವಿರಳವಾಗಿದೆ. ಇದರಿಂದ ರೈತಾಪಿ ವರ್ಗದಲ್ಲಿ ಆತಂಕ ಹೆಚ್ಚಾಗಿದೆ.
ತಜ್ಞರ ಪ್ರಕಾರ, ಪೆಸಿಫಿಕ್ ಮಹಾಸಾಗರದ ಮಧ್ಯ ಹಾಗೂ ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನ ಅಸಹಜವಾಗಿ ಏರಿಕೆಯಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಈ ಹವಾಮಾನ ಸ್ಥಿತಿಯನ್ನು “ಎಲ್‌ನಿನೋ” ಎಂದು ಕರೆಯಲಾಗುತ್ತದೆ. ಎಲ್‌ನಿನೋ ಪರಿಣಾಮದಿಂದ ಜಾಗತಿಕ ಹವಾಮಾನ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗಿ, ಭಾರತದ ಮುಂಗಾರು ಮಳೆಯ ಪ್ರಮಾಣ ಮತ್ತು ಹಂಚಿಕೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸಾಮಾನ್ಯವಾಗಿ ಎಲ್‌ನಿನೋ ಸಂಭವಿಸುವ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹವಾಮಾನ ತಜ್ಞರು ವಿವರಿಸುತ್ತಾರೆ.
ಕರ್ನಾಟಕದಲ್ಲೂ ಇದರ ಪರಿಣಾಮ ಗೋಚರಿಸುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದರೂ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಸುಮಾರು ೧೯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿತ್ತನೆ ಸಮಯದಲ್ಲೇ ಮಳೆಯ ಕೊರತೆ ಎದುರಾಗುವ ಸಾಧ್ಯತೆಯಿಂದ ರೈತರು ಕಳವಳಗೊಂಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರ ಮಳೆಯ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಈ ಬಾರಿ ಮಳೆಯ ಪ್ರಮಾಣ ವಾಡಿಕೆಗಿಂತ ಶೇ.೮ ರಿಂದ ೧೦ ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚು ನೀರಿನ ಅವಶ್ಯಕತೆ ಇರುವ ಬೆಳೆಗಳ ಬದಲಿಗೆ ಕಡಿಮೆ ನೀರಿನ ಅವಶ್ಯಕತೆ ಇರುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹವಾಮಾನ ತಜ್ಞರು ರೈತರಿಗೆ ಸಲಹೆ ನೀಡಿದ್ದಾರೆ.
ಎಲ್‌ನಿನೋ ಪರಿಣಾಮದಿಂದ ಮುಂಗಾರು ಆರಂಭದಲ್ಲೇ ಹಿನ್ನಡೆ ಕಂಡಿದ್ದು, ಮಳೆ ಅವಲಂಬಿತ ಕೃಷಿ ನಡೆಸುವ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವುದು ವಾಸ್ತವ. ಮುಂದಿನ ವಾರಗಳಲ್ಲಿ ಹವಾಮಾನದಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.




























