Home ಜಿಲ್ಲೆ ಬೆಂಗಳೂರು ಸಮ ಕಾಲೀನ ಅಗತ್ಯತೆಗೆ ಪೂರಕ ಶಿಕ್ಷಣ ಅಗತ್ಯ

ಸಮ ಕಾಲೀನ ಅಗತ್ಯತೆಗೆ ಪೂರಕ ಶಿಕ್ಷಣ ಅಗತ್ಯ

ಕೆಂಗೇರಿ,ಜೂ.೧೭: ಪೋಷಣೆ ದೊರಕದ ದೇಹವು ಸೊರಗುತ್ತದೆ ಅದರಂತೆ ಸಮ ಕಾಲೀನ ಅಗತ್ಯತೆ ಹಾಗೂ ನಿರೀಕ್ಷೆಗೆ ಪೂರಕವಾದ ಶಿಕ್ಷಣ ಪಡೆಯದ ಸಮಾಜ ಹಾಗೂ ದೇಶ ಅಭಿವೃದ್ಧಿ ವಂಚಿತವಾಗುತ್ತದೆ ಎಂದು ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.


ಎಸ್ ಜೆ ಬಿ ಐ ಟಿ ಕಾಲೇಜಿನ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಶಿಕ್ಷಣವು ಮಾನವ ಜನಾಂಗವನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೋಯ್ದು ಮುಕ್ತಿ ನೀಡುವ ಕ್ರಮವೆಂದು ಭಾವಿಸಲಾಗುತ್ತಿತ್ತು. ಬದಲಾದ ಕಾಲ ಘಟ್ಟವು ಶಿಕ್ಷಣಕ್ಕೆ ನೂತನ ವ್ಯಾಖ್ಯಾನ ನೀಡಿದೆ. ಈ ಸಂಕ್ರಮಣದ ನಡುವೆಯೂ ಮಾನವೀಯ ಮೌಲ್ಯ, ವೃತ್ತಿ ಧರ್ಮ ಹಾಗೂ ಸಾಮಾಜಿಕ ಕಳಕಳಿಯನ್ನು ಕಾಪಿಟ್ಟುಕೊಂಡು ಸಾಗುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಹೇಳಿದರು.


ವಿ. ಟಿ. ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಮಾತನಾಡಿ, ಎ ಐ ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನವು ದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿದೆ. ೨೦೩೦ರ ವೇಳೆಗೆ ಸೂಪರ್ ಎ ಐ ತಂತ್ರ ಜ್ಞಾನ ಚಾಲ್ತಿಯಲ್ಲಿರಲಿದೆ. ಜಾಗತಿಕ ತಾಂತ್ರಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹಾಗೂ ಅಮೇರಿಕಾ ಮತ್ತು ಚೀನಾ ದೇಶವನ್ನು ಸಮಗ್ರವಾಗಿ ಎದುರಿಸುವ ದಿಸೆಯಲ್ಲಿ, ವಿದ್ಯಾರ್ಥಿಗಳು ತಂತ್ರ ಜ್ಞಾನದ ಸಂಶೋಧನೆ ಹಾಗೂ ಆವಿಷ್ಕಾರದಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.


ಎಐಸಿಟಿಇ ಮಾಜಿ ಅಧ್ಯಕ್ಷ ಟಿ ಜಿ ಸೀತಾರಾಮ್ ಮಾತನಾಡಿ, ಮಾನವನ ಬುದ್ದಿಮತ್ತೆಗೆ ಯಾವುದೇ ತಂತ್ರ ಜ್ಞಾನ ಸಾಟಿಯಲ್ಲ. ಎ ಐ ತಂತ್ರಜ್ಞಾನಕ್ಕಿಂತ ಮಾನವನ ಮಸ್ತಿಷ್ಕ ಮಿಗಿಲು. ಎಐ ತಂತ್ರಜ್ಞಾನ ಮನುಜ ಕುಲದ ಅಭಿವೃದ್ಧಿಗೆ ಸಹಕಾರಿ ಎಂದರು.


೨೦೪೭ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಯುವ ಜನಾಂಗದ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.


“ರೈಲ್ವೆ, ಸೆಮಿಕಂಡಕ್ಟರ್, ಎ ಐ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಭಾರತದ ಅಭಿವೃದ್ಧಿ ಗತಿ, ವಿಶ್ವದ ಗಮನ ಸೆಳೆದಿದೆ. ಇಂತಹ ಪರ್ವ ಕಾಲದಲ್ಲಿ ಪದವಿ ಪಡೆಡಿರುವ ವಿದ್ಯಾರ್ಥಿಗಳಿಗೆ ಎಲ್ಲೆಡೆ ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ ಎಂದುಬಾಶ್ ಎಕ್ಸ್ರಾತ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
ರಮೇಶ್ ಬಿ. ವಿ ಹೇಳಿದರು. ಉದ್ಯಮಿಕ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕಲಿಕೆ ನಿರಂತರವಾಗಿರಲಿ ಎಂದು ಸಲಹೆ ನೀಡಿದರು. ಸಾಧನೆ ಹಾಗೂ ಬೆಳವಣಿಗೆಯಲ್ಲಿ ಸತ್ ಚಾರಿತ್ರ್ಯ ದೊಡ್ಡ ಪಾತ್ರ ವಹಿಸುತ್ತದೆ. ನಡೆ ನುಡಿ ಶುದ್ಧವಾಗಿರಲಿ ಎಂದು ತಿಳಿಸಿದರು.


ಬಿ ಜಿ ಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿ, ಪ್ರಾಂಶುಪಾಲ ಡಾ. ಮಹೇಂದ್ರ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು