Home ಜಿಲ್ಲೆ ಕಲಬುರಗಿ ರೌಡಿ ಶೀಟರ್ ಹಡ್ಡಿ ಪಿಂಟ್ಯಾ ಗಡಿಪಾರು

ರೌಡಿ ಶೀಟರ್ ಹಡ್ಡಿ ಪಿಂಟ್ಯಾ ಗಡಿಪಾರು

ಕಲಬುರಗಿ,ಜೂ.17-ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ನಿತೀನಕುಮಾರ ಅಲಿಯಾಸ್ ಹಡ್ಡಿ ಪಿಂಟ್ಯಾ ತಂದೆ ದೇವಿದಾಸ ಸೂರ್ಯವಂಶಿ (32)ಯನ್ನು ಬಳ್ಳಾರಿ ಜಿಲ್ಲೆಯ ಕೌಲಬಜಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ನಗರದ ಕುವೆಂಪು ನಗರ ನಿವಾಸಿಯಾದ ಈತನ ಮೇಲೆ ವಿವಿಧ ಕಲಂಗಳ ಅಡಿಯಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಆರೋಪಿ ರೂಢಿಗತ ಅಪರಾಧಿಯಾಗಿದ್ದು, 2012 ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ/ಭಾರತೀಯ ನ್ಯಾಯ ಸಂಹಿತೆ ಕಾಯ್ದೆ-2023ರ ಅಡಿಯಲ್ಲಿ 7 ಪ್ರಕರಣಗಳು ಮತ್ತು ಭಾರತೀಯ ನಾಗರಿಕ ಸುರಕ್ಷತಾ ಅಡಿಯಲ್ಲಿ 6 ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ರೌಡಿಶೀಟ್ ಚಾಲ್ತಿಯಲ್ಲಿದೆ.
ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ಅಪಾಯಕಾರಿ ವಸ್ತುಗಳಿಂದ ಹಲ್ಲೆ ಮಾಡುವುದು, ಜೀವ ಭಯ ಹಾಕುವುದು, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗುತ್ತ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವಿವಿಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದ ಮೇರೆಗೆ ಆರೋಪಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಕಾನೂನಿನ ಬಗ್ಗೆ ಸೂಕ್ತ ಗೌರವ ಹೊಂದುವಂತೆ ಮನವರಿಕೆ ಮಾಡಿಕೊಡಲು, ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳುವ ಹಿತ ದೃಷ್ಟಿಯಿಂದ ರೌಡಿಶೀಟರ್ ನಿತೀನಕುಮಾರ ಅಲಿಯಾಸ್ ಹಡ್ಡಿ ಪಿಂಟ್ಯಾನನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯ ಎಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಜಿ.ಎಂ.ಪಾಟೀಲ ಅವರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡಿಸಿಪಿ ಶಾಲೂ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ನ್ಯಾಯಾಲಯ ವಿಶೇಷ ವಿಚಾರಣೆ ಕೈಗೊಂಡು ರೌಡಿಶೀಟರ್ ನಿತೀನಕುಮಾರ ಅಲಿಯಾಸ್ ಹಡ್ಡಿ ಪಿಂಟ್ಯಾನನ್ನು 1 ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಯ ಕೌಲಬಜಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಆದೇಶ ಮಾಡಿ ಡಿಸಿಪಿ ಶಾಲೂ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರ ನ್ಯಾಯಾಲಯ ಆದೇಶ ಹೊರಡಿಸಿದೆ.