Home ಜಿಲ್ಲೆ ಬೆಂಗಳೂರು ಬಿಡದಿ ಟೌನ್ ಶಿಪ್:ಜೆಡಿಎಸ್-ಬಿಜೆಪಿ ಸರ್ಕಾರದ ತೀರ್ಮಾನ

ಬಿಡದಿ ಟೌನ್ ಶಿಪ್:ಜೆಡಿಎಸ್-ಬಿಜೆಪಿ ಸರ್ಕಾರದ ತೀರ್ಮಾನ

ಬೆಂಗಳೂರು,ಜೂ.೧೭-ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ೨೩-೦೯-೨೦೦೬ರಲ್ಲಿ ಬೆಂಗಳೂರಿನ ಜನಸಂಖ್ಯೆ ಪ್ರಮಾಣ ಕಡಿಮೆ ಮಾಡಲು ಬೆಂಗಳೂರಿನ ಸುತ್ತಮುತ್ತ ಐದು ಕಡೆ ೬೦,೭೦೦ ಎಕರೆಯಲ್ಲಿ ಟೌನ್ ಶಿಪ್ ಮಾಡಲು ತೀರ್ಮಾನ ಮಾಡುತ್ತಾರೆ. ನಂದಗುಡಿ, ಕಸಬಾ, ಬಿಡದಿ, ಸೋಲೂರು, ಸಾತನೂರಿನಲ್ಲಿ ಮಾಡಲು ಮುಂದಾಗುತ್ತದೆ. ಈ ಪೈಕಿ ಮುಂಚೂಣಿಯಲ್ಲಿರುವುದು ಬಿಡದಿಯಲ್ಲಿರುವ ೯,೪೮೪ ಎಕರೆಯಲ್ಲಿ ಟೌನ್ ಶಿಪ್ ಮಾಡಲು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ರವರು ತಿಳಿಸಿದರು.


ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ೭೪೮೧ ಎಕರೆ ಜಮೀನನ್ನು ನಮ್ಮ ಸರ್ಕಾರ ೨೭-೦೫-೨೦೨೬ರಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯಲ್ಲಿ ೭ನೇ ಬಾರಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಯೋಜನೆಯಲ್ಲಿ ಜಮೀನು ಪಡೆದು ನಿವೇಷನ ಮಾಡಿ ಅದನ್ನು ಬೇರೆಯವರಿಗೆ ಹಂಚುವ ಉದ್ದೇಶವಿಲ್ಲ. ಕೈಗಾರಿಕಾ ಕಾರಿಡಾರ್ ಮಾಡುವ ೭೪೮೧ ಎಕರೆ ಜತೆಗೆ ರೆಸಿಡೆನ್ಷಿಯಲ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಭೂಮಿಯನ್ನು ವಶಪಡಿಸಿಕೊಂಡು ನೀಡುವುದಷ್ಟೇ ನಮ್ಮ ಕೆಲಸ. ಉಳಿದ ಟೌನ್ ಶಿಪ್ ಅನ್ನು ಅವರೇ ನಿರ್ಮಾಣ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.


ಕುಮಾರಸ್ವಾಮಿ ಅವರು ೩೩ ಸಾವಿರ ಕೋಟಿ ಹಗರಣ ಎಂದು ಆರೋಪ ಮಾಡುತ್ತಿದ್ದಾರೆ. ಇಲ್ಲಿ ಇಷ್ಟು ಹಣ ಎಲ್ಲಿಂದ ಬರುತ್ತದೆ ಎಂಬುದು ಅರ್ಥವಾಗದ ಪ್ರಶ್ನೆ. ಮೋದಿ ಅವರು ಪ್ರಧಾನಿಯಾದ ಬಳಿಕ ಇಡೀ ದೇಶದಲ್ಲಿ ಸುಮಾರು ೧೦೦ ಟೌನ್ ಶಿಪ್ ಗಳು ನಿರ್ಮಾಣವಾಗಿವೆ. ಇವುಗಳಲ್ಲಿ ಬಹುತೇಕ ಟೌನ್ ಶಿಪ್ ಗಳಾಗಿರುವುದು ಬಿಜೆಪಿ ಆಡಳಿತ ರಾಜ್ಯಗಳಲ್ಲಿ. ಇನ್ನು ೧೦೦ ಸಣ್ಣ ಟೌನ ಶಿಪ್ ಗಳು ನಿರ್ಮಾಣವಾಗಿದೆ.

ಬಿಡದಿಯಲ್ಲಿ ೭೪೮೧ ಎಕರೆ ಪೈಕಿ, ೯ ಹಳ್ಳಿಗಳ ೬,೦೪೩ ರೈತರಿಂದ ಜಮೀನು ಪಡೆಯುತ್ತಿದ್ದೇವೆ. ಇದರಲ್ಲಿ ಯಾವುದೇ ಕಾರಣಕ್ಕೆ ಜಮೀನು ನೀಡುವುದಿಲ್ಲ ಎಂದು ಬರವಣಿಗೆ ಮೂಲಕ ಆಕ್ಷೇಪಣೆ ಸಲ್ಲಿಸಿರುವ ರೈತರ ಸಂಖ್ಯೆ ೧೩೬೭. ಈ ರೈತರಿಗೆ ಪರಿಶೀಲನೆಗೆ ಬಿಎಂಆರ್ ಡಿಎ ಆಯುಕ್ತರ ನೇತೃತ್ವದ ಸಮಿತಿ ಮೂಲಕ ನೊಟೀಸ್ ನೀಡಿ ನಿಮ್ಮ ಅಹವಾಲು ಏನು ಎಂದು ಕೇಳಲಾಗುತ್ತದೆ. ೧,೩೬೭ ರೈತರ ಪೈಕಿ ೨೪೭ ರೈತರು ಬರಲಿಲ್ಲ. ಇನ್ನುಳಿದ ರೈತರ ಪೈಕಿ ೨೫೯ ರೈತರು ಹಾಜರಾಗಿ ನಮಗೆ ಪರಿಹಾರ ಹೆಚ್ಚಿಸಿ ಎಂದು ಮನವಿ ಮಾಡಿದರು. ೬೬೩ ರೈತರು ಮಾತ್ರ ಯಾವುದೇ ಕಾರಣಕ್ಕೆ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ಇವರ ಒಟ್ಟು ಜಾಗ ೧೩೪೮ ಎಕರೆ. ಅಂದರೆ ೧೧% ರೈತರು ಮಾತ್ರ ಭೂಮಿ ಕೊಡಲ್ಲ ಎಂದು ಹೇಳುತ್ತಿದ್ದಾರೆ ಎಂದರು.