
ತಿರುವನಂತಪುರಂ,ಮೇ.೨೭- ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ – ಸಿಎಂಆರ್ ಎಲ್ ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ , ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿದೆ
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ -ಪಿಎಂಎಲ್‌ಎ ನಿಬಂಧನೆಗಳ ಅಡಿಯಲ್ಲಿ ರಾಜ್ಯಾದ್ಯಂತ ೧೦ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಬೆಳಗ್ಗೆಯಿಂದಲೇ ಶೋಧ ನಡೆಸಲಾಗುತ್ತಿದೆ.
ತಿರುವನಂತಪುರಂನಲ್ಲಿರುವ ಪಿಣರಾಯಿ ವಿಜಯನ್ ಅವರಿಗೆ ಸೇರಿದ ಬಾಡಿಗೆ ನಿವಾಸದಲ್ಲಿ ಶೋಧ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ. ಜೊತೆಗೆ ಪಿಣರಾಣಿ ವಿಜಯನ್ ಅವರ ಪುತ್ರಿ ವೀಣಾ ಅವರ ಕಚೇರಿ, ನಿವಾಸ ಸೇರಿದಂತೆ ಮತ್ತಿತರ ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.
೨೦೧೮ ಮತ್ತು ೨೦೧೯ ರ ನಡುವೆ ಪಿಣರಾಣಿ ವಿಜಯನ್ ಅವರ ಪುತ್ರಿ ಟಿ ವೀಣಾ ಒಡೆತನದ ಎಕ್ಸಾಲಾಜಿಕ್ ಸೆಲ್ಯೂಷನ್ಸ್ ಎಂಬ ಐಟಿ ಕಂಪನಿಗೆ ಯಾವುದೇ ಸೇವೆಗಳನ್ನು ನೀಡಲಾಗಿಲ್ಲ ಎನ್ನಲಾಗಿದ್ದರೂ, ಸಿಎಂಆರ್ ಎಲ್ ೧.೭೨ ಕೋಟಿ ರೂ.ಗಳ ಅಕ್ರಮ ಪಾವತಿಗಳನ್ನು ಮಾಡಿದೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಈ ದಾಳಿ ನಡೆಸಿದೆ.
ತನಿಖಾಧಿಕಾರಿಗಳು ನಕಲಿ ಎಂದು ಶಂಕಿಸಿರುವ ಖರ್ಚುಗಳ ನೆಪದಲ್ಲಿ ಸಿಎಂಆರ್ ಎಲ್ ನಿಂದ ಹಣವನ್ನು ವಿವಿಧ ವ್ಯಕ್ತಿಗಳಿಗೆ ತಿರುಗಿಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಜಾರಿ ನಿರ್ದೇಶನಾಲಯದ ಪರಿಶೀಲನೆಯಲ್ಲಿರುವ ಆಪಾದಿತ ಫಲಾನುಭವಿಗಳಲ್ಲಿ ವಿಜಯನ್ ಅವರ ಮಗಳು ವೀಣಾ ಕೂಡ ಇದ್ದಾರೆ ಎಂದು ವರದಿ ತಿಳಿಸಿದೆ
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಈ ಶೋಧಗಳು ನಡೆದಿವೆ.
ಕಂಪನಿಗೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳ ತನಿಖೆಗಾಗಿ ಫೆಡರಲ್ ಏಜೆನ್ಸಿ ೨೦೨೪ ರಲ್ಲಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.


























