Home ಜಿಲ್ಲೆ ಪ್ರಾಥಮಿಕ ಶಿಕ್ಷಣಕ್ಕೆ ಡಿಜಿಟಲ್ ತಂತ್ರಜ್ಞಾನ ಪೂರಕ: ಪ್ರಭುಕುಮಾರ ಸ್ವಾಮೀಜಿ

ಪ್ರಾಥಮಿಕ ಶಿಕ್ಷಣಕ್ಕೆ ಡಿಜಿಟಲ್ ತಂತ್ರಜ್ಞಾನ ಪೂರಕ: ಪ್ರಭುಕುಮಾರ ಸ್ವಾಮೀಜಿ

ವಿಜಯಪುರ, ಸೆ. 25: ಅಲಿಯಾಬಾದ್ ಕೆ.ಎಚ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಡಿಜಿಟಲ್ ತಂತ್ರಜ್ಞಾನ ಬಳಸುವುದು ಉತ್ತಮ ಸಾಧನವಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮಸೂತಿ ಗ್ರಾಮದ ಚಕ್ರವರ್ತಿ ಜಗದ್ಗುರು ಪ್ರಭುಕುಮಾರ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಅಲಿಯಾಬಾದ್ ಕೆ.ಎಚ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಠ ತಪಿದಾಸ ಮತ್ತು ತುಳಸಿದಾಸ ವಜ್ರದಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ 1.50 ಲಕ್ಷ ದೇಣಿಗೆಯಲ್ಲಿ ನೀಡಲಾದ ಡಿಜಿಟಲ್ ಬೋರ್ಡ್ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮನ್ವಯದಿಂದ ಉತ್ತಮ ಕಲಿಕಾ ವಾತಾವರಣ ನಿರ್ಮಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕಲಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆ ಅತ್ಯವಶ್ಯವಾಗಿದೆ. ದೃಕ್-ಶ್ರವಣ ಮಾಧ್ಯಮದ ಮೂಲಕ ಪಾಠ ಬೋಧಿಸಿದರೆ ಮಕ್ಕಳ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಶಿಕ್ಷಕರು ದಾನಿಗಳ ನೆರವಿನಿಂದ ಇಂತಹ ಶೈಕ್ಷಣಿಕ ಪರಿಕರಗಳನ್ನು ಸಂಗ್ರಹಿಸಿ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯಕ್ಕೆ ಸಾಕ್ಷಿಯಾಗಬೇಕು ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಅಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ, ಶಾಲೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರ ಶೈಕ್ಷಣಿಕ ಸಾಮಥ್ರ್ಯ ಬೆಳೆಸಲು ಅಗತ್ಯವಾದ ಪೆÇ್ರೀತ್ಸಾಹ ನೀಡಬೇಕು. ಗ್ರಾಮಗಳ ಹಿರಿಯರು ಹಾಗೂ ಶಿಕ್ಷಣ ಪ್ರೇಮಿಗಳು ಶಾಲೆಗಳನ್ನು ದತ್ತು ಪಡೆದು ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗ್ಯವಂತಿ ಆಸ್ಪತ್ರೆಯ ವೈದ್ಯರಾದ ಡಾ. ಕೆ.ಬಿ. ಹಿರೇಮಠ ಅವರಿಗೆ ಗೌರವ ಸಲ್ಲಿಸಲಾಯಿತು. ಟ್ರಸ್ಟ್ ಸಂಯೋಜಕರಾದ ವಿ.ಎಂ. ಸಿಂದಗಿ ದಂಪತಿಯನ್ನು ಸನ್ಮಾನಿಸಲಾಯಿತು.
ಜಿಒಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ ಕೊಣದಿ, ಶಿಕ್ಷಕರಾದ ಎಚ್.ಕೆ. ಬೂದಿಹಾಳ, ಬಸವರಾಜ ತಾಳಿಕೋಟಿ, ಎಸ್‍ಡಿಎಂಸಿ ಅಧ್ಯಕ್ಷ ವಿಠೋಬ ಮಾನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಕುಂತಲಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎ.ಡಿ. ದೊಡಮನಿ ನಿರೂಪಿಸಿದರು. ಶಿಕ್ಷಕಿ ರೇವತಿ ಬೂದಿಹಾಳ, ಸಿ.ಟಿ. ಚವಾಣ್, ರವಿ ಬಜಂತ್ರಿ, ರೇಣುಕಾ ತಳವಾರ, ಭಾರತಿ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.