
ಕೋಲಾರ: ಜು,೨೯-ಜಿಲ್ಲೆಯಲ್ಲಿ ಕಳೆದ ೧೯ ತಿಂಗಳುಗಳಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಹಾಗೂ ಆಡಳಿತವನ್ನು ಜನಮುಖಿ ಮತ್ತು ಜನಸ್ನೇಹಿಯಾಗಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದ್ದಾರೆ.
ತಮ್ಮ ಸೇವಾ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೯೨ರ ಡಿಸೆಂಬರ್ ೨೬ರಂದು ಚಿಂತಾಮಣಿಯ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ತಾವು, ಕಾಕತಾಳೀಯವೆಂಬಂತೆ ಕೋಲಾರದಲ್ಲಿಯೇ ಜಿಲ್ಲಾಧಿಕಾರಿಯಾಗಿ ತಮ್ಮ ಸೇವೆಯನ್ನು ಪೂರ್ಣಗೊಳಿಸುತ್ತಿರುವುದು ವಿಶೇಷವಾಗಿದೆ ಎಂದು ಸ್ಮರಿಸಿದರು.
ತಮ್ಮ ಆಡಳಿತಾವಧಿಯಲ್ಲಿ ಸಹಕರಿಸಿದ ಜಿಲ್ಲೆಯ ಜನತೆ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಜುಲೈ ೩೧ ರಂದು ತಮ್ಮ ಸೇವಾ ಅವಧಿ ಮುಗಿಯುತ್ತಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಎಂ.ಆರ್. ರವಿಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ತಾವು ರಾಜಕೀಯಕ್ಕೆ ಸೇರುತ್ತಾರೆ ಎಂಬ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ತಮಗೆ ರಾಜಕೀಯದ ಒಲವಿಲ್ಲ ಎಂದರು.
ನಿವೃತ್ತಿಯ ನಂತರ ಮೈಸೂರಿನಲ್ಲಿ ನೆಲೆಸಲಿದ್ದು, ಓದು, ಬರಹ, ಪ್ರವಾಸ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ೨೨ ಎಕರೆ ಜಾಗ ಗುರುತಿಸಲಾಗಿದ್ದು, ಡಿಪಿಆರ್ ಸಿದ್ಧವಾಗಿದೆ ಹಾಗೂ ಅರಣ್ಯ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ ಎಂದರು.
ಜೊತೆಗೆ, ಕೃಷಿ ಆಧಾರಿತ ಸಂಸ್ಕರಣಾ ಕೈಗಾರಿಕಾ ವಸಾಹತು ಸ್ಥಾಪನೆಗೆ ೧೦೦ ಎಕರೆ ಜಾಗ ಮೀಸಲಿಡುವ ಪ್ರಸ್ತಾವನೆ, ಎಪಿಎಂಸಿಗೆ ೬೦ ಎಕರೆ ಜಾಗ ಮತ್ತು ಹೆದ್ದಾರಿಯಲ್ಲಿ ಅಪಘಾತಗಳ ತ್ವರಿತ ಚಿಕಿತ್ಸೆಗಾಗಿ ಟ್ರಾಮಾ ಸೆಂಟರ್ ಸ್ಥಾಪನೆಯಂತಹ ಯೋಜನೆಗಳು ಶೀಘ್ರದಲ್ಲೇ ಈಡೇರುವ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ತಮ್ಮ ಅಧಿಕಾರ ಅವಧಿಯಲ್ಲಿ ಸಹಕರಿಸಿದ ಜನಪ್ರತಿನಿಧಿಗಳು, ಸಾರ್ವಜನಿಕರು, ಪತ್ರಕರ್ತರು, ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಪ್ರತಿಯೊಬ್ಬರನ್ನೂ ಸ್ಮರಿಸಿ ಧನ್ಯವಾದ ಅರ್ಪಿಸಿದರು.


































