
ವಿಜಯಪುರ, ಜು.20:ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಜಯಪುರದ ಕುಖ್ಯಾತ ರೌಡಿ ಮಡಿವಾಳಯ್ಯ ಪಂಚಯ್ಯ ಹಿರೇಮಠ (38) ವಿರುದ್ಧ ಕರ್ನಾಟಕ ಗೂಂಡಾ ಕಾಯ್ದೆ ಅಡಿ ಬಂಧನ ಆದೇಶ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಆನಂದ್ ಕೆ. ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ವಿಜಯಪುರ ನಗರದ ಎಪಿಎಂಸಿ ಪೆÇಲೀಸ್ ಠಾಣೆ ವ್ಯಾಪ್ತಿಯ ಇಂಡಿ ರಸ್ತೆ, ಬಂಬಳ ಅಗಸಿ, ಹಳೆ ಶಿವಶಕ್ತಿ ನಗರ ನಿವಾಸಿಯಾಗಿರುವ ಮಡಿವಾಳಯ್ಯನನ್ನು ಗೂಂಡಾ ಕಾಯ್ದೆ-1985ರ ಕಲಂ 3(1)(2)ರ ಅಡಿಯಲ್ಲಿ ಬಂಧಿಸಿ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಸೂಚಿಸಿದ್ದಾರೆ.
ಆದೇಶದಲ್ಲಿ, ಮಡಿವಾಳಯ್ಯ ವೃತ್ತಿಪರ ಅಪರಾಧಿಯಾಗಿದ್ದು, ಮಾನವ ದೇಹ ಮತ್ತು ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದ ಗಂಭೀರ ಅಪರಾಧಗಳಲ್ಲಿ ತೊಡಗುವ ಪ್ರವೃತ್ತಿ ಹೊಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಈತನ ಚಟುವಟಿಕೆಗಳು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುವುದರಿಂದ, ಮುಂದಿನ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

































