
ಸಂಜೆವಾಣಿ ನ್ಯೂಸ್
ಮೈಸೂರು ಜು.21:- ಭಾರತದ ಪ್ರಮುಖ ಅಗರಬತ್ತಿ ತಯಾರಕ ಸಂಸ್ಥೆ ಎನ್‍ಆರ್ ಗ್ರೂಪ್, ಮಹಾರಾಣಿ ಟ್ರೋಫಿ ಕೆಎಸ್‍ಸಿಎ ಖಿ20 ಕ್ರಿಕೆಟ್ ಟೂರ್ನಿಯ 2ನೇ ಆವೃತ್ತಿಗಾಗಿ ಮೈಸೂರು ವಾರಿಯರ್ಸ್ ಮಹಿಳಾ ತಂಡವನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಿತು.
ರಾಜ್ಯದ ಪ್ರತಿಭಾವಂತ ಕ್ರಿಕೆಟಿಗ ಶುಭಾ ಸತೀಶ್ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೈಸೂರು ವಾರಿಯರ್ಸ್ ಈ ಬಾರಿ ಇನ್ನಷ್ಟು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.
ಭಾರತ ತಂಡದ ಮಾಜಿ ಆಟಗಾರ್ತಿ ಕರುಣಾ ಜೈನ್ ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತಂಡವು ಬೆಂಗಳೂರಿನಲ್ಲಿ ಕಠಿಣ ತರಬೇತಿ ನಡೆಸುತ್ತಿದೆ.
ದೀಪಿಕಾ ಟಿ.ಸಿ.ರಿಂದ ಶುಭ ಹಾರೈಕೆ:
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡದ ವಿಶ್ವಕಪ್ ವಿಜೇತ ನಾಯಕಿ ಮತ್ತು ರಂಗರಾವ್ ಸ್ಮಾರಕ ವಿಶೇಷಚೇತನರ ಶಾಲೆಯ ಹಳೆಯ ವಿದ್ಯಾರ್ಥಿನಿ ದೀಪಿಕಾ ಟಿ.ಸಿ. ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮೈಸೂರು ವಾರಿಯರ್ಸ್‍ನಂತಹ ಫ್ರಾಂಚೈಸಿಗಳ ಬೆಂಬಲ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಅತ್ಯಂತ ಮುಖ್ಯ. ರಂಗ ಕುಟುಂಬ ಮತ್ತು ಆರ್‍ಎಂಎಸ್‍ಡಿ ಶಾಲೆ ನೀಡಿದ ಅವಕಾಶದಿಂದಾಗಿಯೇ ನಾನು ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಯಿತು” ಎಂದು ಹೇಳಿದರು.
ಅರ್ಜುನ್ ರಂಗ, ಶುಭಾ ಸತೀಶ್ ಹೇಳಿದ್ದೇನು:
ಮೈಸೂರು ವಾರಿಯರ್ಸ್ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, “ನಮ್ಮ ಉದ್ದೇಶ ಕೇವಲ ಸ್ಪರ್ಧಿಸುವುದಷ್ಟೇ ಅಲ್ಲ. ಪ್ರತಿಭಾವಂತ ಮಹಿಳಾ ಕ್ರಿಕೆಟಿಗರಿಗೆ ವೃತ್ತಿಪರ ವೇದಿಕೆ ಸೃಷ್ಟಿಸುವುದಾಗಿದೆ” ಎಂದರು.
ನಾಯಕಿ ಶುಭಾ ಸತೀಶ್ ಮಾತನಾಡಿ, ಈ ಬಾರಿ ನಾವು ಸಂಪೂರ್ಣ ಸಜ್ಜಾಗಿದ್ದೇವೆ. ಭಯವಿಲ್ಲದ ಪಾಸಿಟಿವ್ ಕ್ರಿಕೆಟ್ ಆಡಿ ಮೈಸೂರಿಗೆ ಟ್ರೋಫಿ ತರುವುದೇ ನಮ್ಮ ಗುರಿ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯ ತರಬೇತುದಾರ ಕರುಣಾ ಜೈನ್ ಮಾತನಾಡಿ,ಅನುಭವಿ ಮತ್ತು ಯುವ ಆಟಗಾರ್ತಿಯರ ಸಮತೋಲನ ನಮ್ಮಲ್ಲಿದೆ. ಸ್ಥಿರ ಪ್ರದರ್ಶನ ನೀಡುವ ಭರವಸೆ ಇದೆ” ಎಂದರು.
ಪಂದ್ಯಾವಳಿ ವಿವರ:
ಮಹಾರಾಣಿ ಟ್ರೋಫಿ 2026 ಟೂರ್ನಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಮೈಸೂರು ಸೇರಿ ಒಟ್ಟು 4 ಫ್ರಾಂಚೈಸಿಗಳು ಭಾಗವಹಿಸಲಿವೆ. ಪಂದ್ಯಗಳು ಜುಲೈ 22 ರಿಂದ ಆಗಸ್ಟ್ 2, 2026 ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಸಾಮಾಜಿಕ ಕಾಳಜಿ:
ಮೈಸೂರು ವಾರಿಯರ್ಸ್, ಮೈಸೂರಿನ ಕೆರಗಳ್ಳಿಯ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದೊಂದಿಗೆ ಪಾಲುದಾರಿಕೆ ಮುಂದುವರಿಸಿದೆ. ಇದರೊಂದಿಗೆ ಕ್ರಿಕೆಟ್ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಭಾಗವಾಗಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಉಷಾ ಕಿರಣ್ ಕಣ್ಣಿನ ಆಸ್ಪತ್ರೆ ಮತ್ತು ಎಬಿಲಿಟಿ ಸ್ಪೋಟ್ರ್ಸ್ ಲೀಗ್‍ಗೆ ತಲಾ 1.5 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿತು.
ಈ ಕಾರ್ಯಕ್ರಮದಲ್ಲಿ ಆಟಗಾರ್ತಿಯರು, ಪ್ರಾಯೋಜಕರು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.


































