Home ಜಿಲ್ಲೆ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ಸಬಲೀಕರಣಕ್ಕೆ ಆಶಾಕಿರಣದ ವಿನೂತನ ಯೋಜನೆ

ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ಸಬಲೀಕರಣಕ್ಕೆ ಆಶಾಕಿರಣದ ವಿನೂತನ ಯೋಜನೆ

ಯಾದಗಿರಿ:ಜು.೨೧: ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಭಿಕ್ಷಾಟನೆ ಹಾಗೂ ಲೈಂಗಿಕ ವೃತ್ತಿಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಯಾದಗಿರಿಯ ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಎಸ್‌ಎಫ್ ಸಂಯುಕ್ತವಾಗಿ ವಿನೂತನ ಜೀವನೋಪಾಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಕಳೆದ ಆರು ತಿಂಗಳಿAದ ಸುಮಾರು ೪೦ ಮಂದಿ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ. ಜೊತೆಗೆ ಗ್ರಾಮೀಣ ಭಾಗದ ಮಹಿಳೆಯರಿಗೆ ಕುರಿ ಸಾಕಣೆ, ಕೋಳಿ ಸಾಕಣೆ, ಹೈನುಗಾರಿಕೆ ಸೇರಿದಂತೆ ವಿವಿಧ ಆದಾಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಲು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ದೊರಕುವಂತೆ ಸಂಸ್ಥೆ ನೆರವು ನೀಡುತ್ತಿದೆ.
ಈ ಯೋಜನೆಯ ಭಾಗವಾಗಿ ‘ಬೆಣ್ಣೆ ಅಂಗಳ’ ವತಿಯಿಂದ ತಯಾರಿಸಲಾದ ಬನ್ ಮಾಸ್ಕಾ ಉತ್ಪನ್ನಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಅರಿಯುವ ಉದ್ದೇಶದಿಂದ ನಗರದ ಹೊಸ ಬಸ್ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಮಾರಾಟ ಕಾರ್ಯಕ್ರಮ ಆಯೋಜಿಸಲಾಯಿತು. ಸಾರ್ವಜನಿಕರು ಉತ್ಪನ್ನವನ್ನು ಖರೀದಿಸಿ ಪ್ರೋತ್ಸಾಹ ನೀಡಿದ ಹಿನ್ನೆಲೆಯಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಯಾ ಎಸ್.ಆರ್. ನಾಯಕ, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಸಮಾಜದಲ್ಲಿ ಘನತೆ ಮತ್ತು ಗೌರವದಿಂದ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗವೇ ಶಾಶ್ವತ ಪರಿಹಾರವಾಗಿದೆ. ಇದೇ ಉದ್ದೇಶದಿಂದ ಸಂಸ್ಥೆ ತರಬೇತಿ, ಮಾರ್ಗದರ್ಶನ ಹಾಗೂ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುತ್ತಿದ್ದು, ಇನ್ನಷ್ಟು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮ್ಯಾಗೇರಿ, ದೀಪಾ, ಮಂಜುಲ್ಕರ್, ಸಹನಾ, ಅರುಣಿತಾ, ಸ್ವಪ್ನಾ, ಭಾರತಿ ಹಾಗೂ ಎಂ.ಡಿ. ಸೋಹಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.