
ಯಾದಗಿರಿ:ಜು.೨೧: ಪ್ಲಾಸ್ಟಿಕ್ ಬಳಕೆ ಪರಿಸರ, ಜೀವಜಗತ್ತು ಮತ್ತು ಮಾನವ ಆರೋಗ್ಯಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಸಂಕಲ್ಪದೊAದಿಗೆ ನ್ಯಾಯಾಂಗವೇ ಜನಜಾಗೃತಿಯ ಮುಂಚೂಣಿಗೆ ಬಂದಿದೆ. ನಗರದ ಗಂಜ್ ಆಂಜನೇಯ ದೇವಸ್ಥಾನ ಆವರಣದಿಂದ ಮಂಗಳವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಯಾದಗಿರಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಚಾಲನೆ ನೀಡಿದರು.
ಜಾಥಾದಲ್ಲಿ ಸ್ವತಃ ಪಾಲ್ಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ನ್ಯಾಯಾಧೀಶರು, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸುವುದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಕರೆ ನೀಡಿದರು. ಪರಿಸರವನ್ನು ಕಲುಷಿತಗೊಳಿಸುವ ಪ್ಲಾಸ್ಟಿಕ್ ಬಳಕೆ ಮುಂದುವರಿದರೆ ಮುಂದಿನ ಪೀಳಿಗೆಗೆ ಗಂಭೀರ ಸಂಕಷ್ಟ ಎದುರಾಗಲಿದೆ. ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವ ಅಗತ್ಯವಿದೆ ಎಂದು ಮರುಳಸಿದ್ದಾರಾಧ್ಯ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ಪ್ಲಾಸ್ಟಿಕ್‌ನಿಂದ ಮಣ್ಣು, ನೀರು ಹಾಗೂ ಜೀವರಾಶಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆ, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಗಂಜ್ ಆಂಜನೇಯ ದೇವಸ್ಥಾನದಿಂದ ಆರಂಭವಾದ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಯುವಕರಿಗೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಮನವಿ ಮಾಡಿತು. ಪರಿಸರ ಸಂರಕ್ಷಣೆಯ ಘೋಷಣೆಗಳು ಜಾಥಾದುದ್ದಕ್ಕೂ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಹೋಮ್ ಗಾರ್ಡ್ ಕಮಾಂಡೆAಟ್ ಈರಣ್ಣ ಬಡಿಗೇರ, ಸಹಾಯಕ ಪರಿಸರ ಅಧಿಕಾರಿ ಶಕುಂತಲಾ, ವಿಜಯ ವಿಠಲ್ ಸೇವಾ ಸಂಸ್ಥೆ ಅಧ್ಯಕ್ಷ ವಿಠಲ್ ಕುಲಕರ್ಣಿ, ಶಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ, ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕಿ ಶರಣಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.































