Home ಜಿಲ್ಲೆ ಮೈಸೂರು ಆ.20ರಂದು ಡಿ.ದೇವರಾಜ ಅರಸ್ 111ನೇ ಜನ್ಮದಿನ ಆಚರಣೆ

ಆ.20ರಂದು ಡಿ.ದೇವರಾಜ ಅರಸ್ 111ನೇ ಜನ್ಮದಿನ ಆಚರಣೆ

ಸಂಜೆವಾಣಿ ನ್ಯೂಸ್
ಮೈಸೂರು ಜು.21:-
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ 111ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಗಸ್ಟ್ 20 ರಂದು ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಕಾರ್ಯಕ್ರಮದ ವೇದಿಕೆ ಮೇಲೆ ಗೀತಾ ಗಾಯನ ಏರ್ಪಡಿಸಲಾಗುವುದು. ಸಮುದಾಯದ ಮುಖಂಡರ ಸಲಹೆಯಂತೆ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಎಲ್ಲಾ ಸಮುದಾಯದವರು ಸೇರಿ ಆಚರಿಸಬೇಕು. ಜಯಂತಿಗಳ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲಿಸುವುದಾಗಿದೆ. ಅವರ ತತ್ವ-ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪುಸ್ತಕ ನೀಡಿ ಸ್ವಾಗತಕ್ಕೆ ಸೂಚನೆ: ವೇದಿಕೆಯ ಮೇಲೆ ಗಣ್ಯರಿಗೆ ಬೊಕ್ಕೆ ನೀಡಿ ಸ್ವಾಗತಿಸುವ ಬದಲು, ಆ ಮಹನೀಯರ ಜೀವನ ಚರಿತ್ರೆ ಕುರಿತ ಪುಸ್ತಕಗಳನ್ನು ನೀಡಿ ಸ್ವಾಗತಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮ ನಡೆಯುವ ಸ್ಥಳದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ ಮತ್ತು ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯಿಂದ ಮಾಡಬೇಕು. ಜಯಂತಿಯ ದಿನ ಮೈಸೂರು ನಗರದಲ್ಲಿರುವ ಎಲ್ಲಾ ಮಹನೀಯರ ಪ್ರತಿಮೆಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೆ ಆಹ್ವಾನ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಸಮುದಾಯದ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.