
ಯಾದಗಿರಿ:ಮೇ.9: ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂಬಂಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಗುರುಮಠಕಲ್ ಪೆÇಲೀಸ್ ಠಾಣೆಯ ಸಿಪಿಐ ವೀರಣ್ಣ ದೊಡ್ಡಮನಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯಲ್ಲೇ ಸಂಚಲನ ಮೂಡಿಸಿದೆ.
ಗೋಪಾಳಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಡಿಎಸ್ ಎಸ್ ತಾಲೂಕು ಸಂಚಾಲಕರಾಗಿರುವ ಆನಂದ್ ಭಜಂತ್ರಿ ಅವರು ನೀಡಿದ ದೂರಿನ ಅನ್ವಯ, ಅಟ್ರಾಸಿಟಿ ಪ್ರಕರಣದ ಕುರಿತು ಮಾಹಿತಿ ಪಡೆಯಲು ಗುರುಮಠಕಲ್ ಪೆÇಲೀಸ್ ಠಾಣೆಗೆ ತೆರಳಿದ ವೇಳೆ, ಸಿಪಿಐ ವೀರಣ್ಣ ದೊಡ್ಡಮನಿ ಅವರು ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಅಲ್ಲದೆ, ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದರೆ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಆನಂದ್ ಭಜಂತ್ರಿ ಅವರ ಹೇಳಿಕೆಯ ಪ್ರಕಾರ, ಆರಂಭದಲ್ಲಿ 2 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ತಕ್ಷಣ ಅಷ್ಟು ಮೊತ್ತ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಬಳಿಕ ಮೊದಲ ಹಂತವಾಗಿ ?1 ಲಕ್ಷ ನೀಡುವುದಾಗಿ ಒಪ್ಪಂದವಾಗಿತ್ತು ಎಂದು ತಿಳಿದು ಬಂದಿದೆ.
ನಂತರ ಹಣ ನೀಡುವ ಮುನ್ನವೇ ಆನಂದ್ ಭಜಂತ್ರಿ ಅವರು ಯಾದಗಿರಿ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಲೋಕಾಯುಕ್ತ ಡಿವೈಎಸ್‍ಪಿ ಜೆ.ಹೆಚ್. ಇನಾಮದಾರ ಅವರ ನೇತೃತ್ವದಲ್ಲಿ ಪಿಐ ಸಿದ್ದರಾಯ ಬೆಳ್ಳೂರಗಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ರೂಪಿಸಿ ದಾಳಿ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 8.30 ಗಂಟೆ ವೇಳೆಗೆ ಗುರುಮಠಕಲ್‍ನಲ್ಲಿರುವ ಸಿಪಿಐ ಅವರ ಸರ್ಕಾರಿ ನಿವಾಸದಲ್ಲಿ 1 ಲಕ್ಷ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಸಿಪಿಐ ವೀರಣ್ಣ ದೊಡ್ಡಮನಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಸ್ಥಳದಲ್ಲೇ ಮಹಜರ್ ಪ್ರಕ್ರಿಯೆ ನಡೆಸಿದ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಲೋಕಾಯುಕ್ತ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಸರ್ಕಾರಿ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಣೆಗೆ ಲಂಚ ಬೇಡಿಕೆ ಇಟ್ಟಿರುವ ಆರೋಪ ಹೊರಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕೆಂದು ಜನರು ಆಗ್ರಹಿಸಿದ್ದಾರೆ.


























