Home ಜಿಲ್ಲೆ ಮದರ್ ತೆರೇಸಾ ಹೆಸರಿನಲ್ಲಿ ಪ್ರಶಸ್ತಿ ನೀಡಲು ಆಗ್ರಹ

ಮದರ್ ತೆರೇಸಾ ಹೆಸರಿನಲ್ಲಿ ಪ್ರಶಸ್ತಿ ನೀಡಲು ಆಗ್ರಹ


ಹುಬ್ಬಳ್ಳಿ, ಸೆ. ೫: ಮಾನವೀಯ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನೋಬೆಲ್ ಪ್ರಶಸ್ತಿ ಪುರಸ್ಕöÈತೆ ಹಾಗೂ ಭಾರತ ರತ್ನ ಮದರ್ ತೆರೇಸಾ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಪ್ರತಿವರ್ಷ ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಬೇಕು ಎಂದು ಫಾದರ್ ಮ್ಯಾಕ್ಸ್ನ್ ಡಿಸೋಜ ಆಗ್ರಹಿಸಿದರು.
ನಗರದ ಕೇಶ್ವಾಪುರ ರಸ್ತೆಯಲ್ಲಿರುವ ಮದರ್ ತೆರೆಸ್ಸಾ ಅವರ ಪುತ್ಥಳಿಯ ಆವರಣದಲ್ಲಿ ಕ್ರಿಶ್ಚಿಯನ್ ಕ್ಯಾಥೋಲಿಕ್ ಸಂಘಟನೆಯ ಆಶ್ರಯದಲ್ಲಿ ನಡೆದ ಮದರ್ ತೆರೇಸಾ ಅವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.


ಮದರ್ ತೆರೇಸಾ ಅವರ ಸೇವೆಯನ್ನು ಸ್ಮರಿಸುವುದಷ್ಟೇ ಅಲ್ಲದೆ, ಅವರ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಪ್ರತಿ ವರ್ಷ ಅವರ ಜನ್ಮದಿನದಂದು ಸಮಾಜಸೇವೆ, ಶಿಕ್ಷಣ, ಆರೋಗ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಿಗೆ “ಮದರ್ ತೆರೇಸಾ ರಾಜ್ಯ ಪ್ರಶಸ್ತಿ” ನೀಡುವಂತಾಗಬೇಕು ಎಂದರು.

ಇದೇ ವೇಳೆ, ಮದರ್ ತೆರೆಸ್ಸಾ ಅವರ ಪುತ್ಥಳಿ ಇರುವ ರಸ್ತೆಗೆ “ಭಾರತ ರತ್ನ ಮದರ್ ತೆರೇಸಾ ಮಾರ್ಗ” ಎಂದು ನಾಮಕರಣ ಮಾಡುವ ಕುರಿತು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಂಡು, ಅದನ್ನು ಜಾರಿಗೆ ತರಲು ಪಾಲಿಕೆಯ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮದರ್ ತೆರೇಸಾ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪುಣ್ಯಸ್ಮರಣೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಇಲ್ಲಿಯಾಸ್ ಮನಿಯಾರ್, ಮಜರ್ಕಾ ಖಾನ ಕಾರ್ಮಿಕ ಮುಖಂಡ ಬಾಬಾಜಾನ್ ಮುಧೋಳ್, ಅಂಥೋನಿ ಡಿಕ್ರೋಜ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸ್ಟೀವನ್ ಕರಡಿ ಸ್ವಾಗತಿಸಿದರು. ಝವಿಯರ್ ಅಂಥೋನಿಯೋ ನಿರೂಪಿಸಿದರು. ಸೂರ್ಯಕಾಂತ್ ಘೋಡಕೆ ವಂದಿಸಿದರು.