
ನವಲಗುಂದ,ಸೆ.೨: ವಿಧಾನಸಭಾ ಕ್ಷೇತ್ರದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಜಿಲ್ಲಾ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್. ಎಚ್. ಕೋನರಡ್ಡಿ ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಬರಗಾಲ ಪ್ರದೇಶ ಅಂತಾ ಘೋಷಣೆಯಾಗದೆ ಇರುವುದು ರೈತಕುಲಕ್ಕೆ ಅನ್ಯಾಯವಾಗಿದೆ ಎಂದು ಅಧ್ಯಕ್ಷ ಲೋಕನಾಥ ಹೆಬಸೂರ ಆರೋಪಿಸಿದರು.
ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ವತಿಯಿಂದ ತಹಶೀಲ್ದಾರ್ ಸುಧೀರ್ ಸಾಹುಕಾರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೂಡಲೇ ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಪ್ರತಿ ಹೆಕ್ಟೇರ್ ಗೆ ೫೦ ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸೆ.೮ರೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡಲಾಗುವುದು. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದರು.
ರಘುನಾಥ ನಡುವಿನಮನಿ, ಧರ್ಮಪ್ಪ ಶಲವಡಿ, ಡಿ. ಎಸ್. ಗುಡಿಸಾಗರ, ಪಿ.ಡಿ. ಚೆನ್ನಪ್ಪಗೌಡ್ರ, ಆರ್. ಆರ್. ಹಲಗತ್ತಿ, ಎಸ್.ಬಿ. ಚಿಕ್ಕನರಗುಂದ, ಸಿದ್ದು ಪೂಜಾರ, ಫಕೀರಗೌಡ ವೆಂಕನಗೌಡ್ರ, ಶಿದ್ದಪ್ಪ ಕಂಬಳಿ, ಭರಮಪ್ಪ ಕಾತರಕಿ, ಸಿದ್ದಪ್ಪ ಕೊಳಲಿನ, ಎಚ್.ಬಿ. ಶಲವಡಿ, ಡಿ.ಎಸ್. ಮಾಸ್ತಿ, ಸುಭಾಸ್ ವಗ್ಗರ ನೂರಾರು ರೈತರು ಭಾಗವಹಿಸಿದ್ದರು.































