
ಬೀದರ್: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್ಐಆರ್ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ‘ಆರ್ಎಸ್ಎಸ್ ಮತ್ತು ಬಿಜೆಪಿಯ ಗೊಡ್ಡು ಬೆದರಿಕೆಗೆ ಹೆದರುವ ಜಾಯಮಾನ ಕಾಂಗ್ರೆಸ್ ಪಕ್ಷದವರದಲ್ಲ. ನಮ್ಮ ಪೂರ್ವಜರು ಅನೇಕ ಎಫ್ಐಆರ್ಗಳನ್ನು ಎದುರಿಸಿ, ತ್ಯಾಗ-ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಂಶಸ್ಥರು ನಾವು. ಇಂತಹ ಎಫ್ಐಆರ್ಗಳಿಗೆ ಹೆದರುವ, ಜಗ್ಗುವ ಅಥವಾ ಬಗ್ಗುವ ಪ್ರಶ್ನೆಯೇ ಇಲ್ಲ’ ಎಂದರು.
‘ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ರಾಮಮಂದಿರದ ಚಂದಾ ಅವ್ಯವಹಾರ, ಮತದಾನ ಅಕ್ರಮ ಹಾಗೂ ನಿರುದ್ಯೋಗ ಸೇರಿದಂತೆ ಯುವಜನರ ಸಮಸ್ಯೆಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಅವರನ್ನು ಕಟ್ಟಿಹಾಕುವ ಬಿಜೆಪಿ ಸರ್ಕಾರದ ಪ್ರಯತ್ನ ವಿಫಲವಾಗಲಿದೆ’ ಎಂದು ಹೇಳಿದರು.
‘ರಾಹುಲ್ ಗಾಂಧಿ ದೇಶದ ಯುವಕರೊಂದಿಗೆ ಬೆರೆತು ಅವರ ಸುಖ-ದುಃಖ ಆಲಿಸುತ್ತಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಪ್ರಧಾನಿ ಹಾಗೂ ಗೃಹ ಸಚಿವರನ್ನು ಜನರು ಪ್ರಶ್ನಿಸುವಂತಾಗಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿರುವುದನ್ನು ಕಂಡು ಬಿಜೆಪಿ ಇಂತಹ ಕೃತ್ಯಗಳಿಗೆ ಮುಂದಾಗಿದೆ. ಇದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಅರಳಿ, ‘ದೇಶದಲ್ಲಿದ್ದಾಗ ಒಂದು ರೀತಿಯ ಹಾಗೂ ವಿದೇಶದಲ್ಲಿ ಮತ್ತೊಂದು ರೀತಿಯ ಹೇಳಿಕೆ ನೀಡುವುದು ದ್ವಂದ್ವ ನಿಲುವಾಗಿದೆ’ ಎಂದು ಟೀಕಿಸಿದರು.
ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಇರ್ಷಾದ್ ಅಲಿ ಪೈಲ್ವಾನ್, ಮಾಜಿ ಸೇವಾದಳ ಅಧ್ಯಕ್ಷ ಅಬ್ದುಲ್ ಸತ್ತಾರ್, ಕೆಪಿಸಿಸಿ ಮಹಿಳಾ ಘಟಕದ ನಾಯಕಿ ರಾಜಶ್ರೀ ಶ್ರೀಕಾಂತ ಸ್ವಾಮಿ, ನಿಸಾರ್ ಅಹ್ಮದ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರದೀಪ ಕುಶನೂರ್, ಶಂಕರರಾವ್ ದೊಡ್ಡಿ ಹಾಗೂ ಗೋವರ್ಧನ ರಾಠೋಡ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಸೇರಿದಂತೆ ಕಾಂಗ್ರೆಸ್ ಮುಖಂಡರು, ಮಹಿಳಾ ಕಾರ್ಯಕರ್ತರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.































