Home ಜಿಲ್ಲೆ ಕಲಬುರಗಿ ಮುಂಗಾರು ಮಳೆ ಕೊರತೆ: ಚಿಂಚೋಳಿ-ಕಾಳಗಿ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಲು ಅವಿನಾಶ ಜಾಧವ ಆಗ್ರಹ

ಮುಂಗಾರು ಮಳೆ ಕೊರತೆ: ಚಿಂಚೋಳಿ-ಕಾಳಗಿ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಲು ಅವಿನಾಶ ಜಾಧವ ಆಗ್ರಹ

ಚಿಂಚೋಳಿ,ಆ.೩೦-ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ ಅರೆ ಮಲೆನಾಡು ಪ್ರದೇಶವಾದ ಚಿಂಚೋಳಿ ತಾಲ್ಲೂಕಿನಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಲಗಳನ್ನು ಉತ್ತಿ ಬಿತ್ತಿದರೂ ಸಮರ್ಪಕ ಮಳೆಯಿಲ್ಲದೆ ಬೆಳೆ ಹಾನಿಯಾಗಿದ್ದು, ರೈತರು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರಕ್ಕೆ ತಾಲ್ಲೂಕಿನ ವಾಸ್ತವ ಸ್ಥಿತಿ ತಿಳಿದಿದ್ದರೂ ಬರಗಾಲ ಘೋಷಿಸದಿರುವುದು ರೈತ ವಿರೋಧಿ ನಿಲುವು ಎನ್ನುವ ಆರೋಪ ಕೇಳಿಬರುತ್ತಿದೆ
ತಾಲ್ಲೂಕಿನಲ್ಲಿ ತಿಂಗಳಿಗೆ ಒಮ್ಮೆ ಮಾತ್ರ ಮಳೆ ಸುರಿದಿದ್ದು, ಇದರಿಂದ ರೈತರು ವಿಳಂಬವಾಗಿ ಬಿತ್ತನೆ ಮಾಡಿದ್ದಾರೆ. ಆದರೆ ಮಳೆಯ ಕೊರತೆಯಿಂದ ಬೆಳೆಗಳು ಬಾಡಿ ಬಸವಳಿದ ಪರಿಣಾಮ ರೈತರ ಕೈಗೆ ಫಲಿತಾಂಶ ತಲುಪುವ ಭರವಸೆ ಕಮ್ಮಿಯಾಗಿದೆ
ಮಳೆಯ ಅಭಾವದಿಂದ ತಾಲ್ಲೂಕಿನ ಸುಮಾರು ಶೇ.೫೦ ಕೊಳವೆ ಬಾವಿಗಳು ಬತ್ತಿಹೋಗಿದ್ದು, ತೆರೆದ ಬಾವಿಗಳಲ್ಲಿಯೂ ನೀರಿನ ಲಭ್ಯತೆ ತೀವ್ರವಾಗಿ ಕುಸಿದಿದೆ. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಪಶುಮೇವಿನ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ
ಹವಾಮಾನ ಅಂಕಿ-ಅAಶಗಳ ಪ್ರಕಾರ, ಜೂನ್ ತಿಂಗಳಲ್ಲಿ ೧೩೪ ಮಿ.ಮೀ ಮಳೆಯ ಬದಲು ಕೇವಲ ೮೫ ಮಿ.ಮೀ (ಶೇ.೪೦ ಕೊರತೆ), ಜುಲೈ ತಿಂಗಳಲ್ಲಿ ೧೭೨ ಮಿ.ಮೀ ಬದಲು ೧೦೪ ಮಿ.ಮೀ (ಶೇ.೪೦ ಕೊರತೆ) ಹಾಗೂ ಆಗಸ್ಟ್ ೨೭ರವರೆಗೆ ೧೮೫ ಮಿ.ಮೀ ಬದಲು ಕೇವಲ ೭೭ ಮಿ.ಮೀ (ಶೇ.೫೮ ಕೊರತೆ) ಮಳೆಯಾಗಿದೆ.
ಅದೇ ರೀತಿಯಲ್ಲಿ ಕಾಳಗಿ ತಾಲ್ಲೂಕಿನಲ್ಲಿಯೂ ಜೂನ್ ತಿಂಗಳಲ್ಲಿ ಶೇ.೩೮, ಜುಲೈ ತಿಂಗಳಲ್ಲಿ ಶೇ.೩೪ ಮತ್ತು ಆಗಸ್ಟ್ ತಿಂಗಳಲ್ಲಿ ಶೇ.೪೯ ಮಳೆಯ ಕೊರತೆ ದಾಖಲಾಗಿದೆ. ಈ ಎರಡೂ ತಾಲ್ಲೂಕುಗಳಲ್ಲಿ ಮಳೆಯಾಶ್ರಿತ ಕೃಷಿಯೇ ಮುಖ್ಯವಾಗಿರುವುದರಿಂದ ರೈತರ ಜೀವನ ಸಂಕಷ್ಟಕರವಾಗಿದೆ.
ಇAತಹ ಗಂಭೀರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದು ಅಕ್ಷಮ್ಯ ಎಂದು ಶಾಸಕ ಡಾ. ಅವಿನಾಶ ಉಮೇಶ ಜಾಧವ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನೂ ಕಾಲ ಮಿಂಚಿಲ್ಲ. ಸರ್ಕಾರ ತಕ್ಷಣ ಈ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು. ಅಧಿಕಾರಿಗಳು ವಾಸ್ತವ ವರದಿ ಸಲ್ಲಿಸದೇ ಹಿಂದಿನ ತಿಂಗಳ ಮಳೆಯ ಸರಾಸರಿಯನ್ನು ಆಧಾರವನ್ನಾಗಿಸುವುದು ಸರಿಯಲ್ಲ
ಬೀದರ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದರೆ, ಅದೇ ಅರೆಮಲೆನಾಡು ಪ್ರದೇಶದ ಭಾಗವಾಗಿರುವ ಚಿಂಚೋಳಿ ಕ್ಷೇತ್ರವನ್ನು ಕಡೆಗಣಿಸಿರುವುದು ಸರಿಯಲ್ಲ. ರೈತರ ವಿಷಯದಲ್ಲಿ ರಾಜಕೀಯ ಮಾಡದೇ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ