Home ಜಿಲ್ಲೆ ತುಮಕೂರು ಅನುದಾನಿತ ಪ್ರೌಢಶಾಲೆಗಳಲ್ಲಿ ದಾಖಲಾತಿ ಕುಸಿತ: ಮುಚ್ಚುವ ಆತಂಕ

ಅನುದಾನಿತ ಪ್ರೌಢಶಾಲೆಗಳಲ್ಲಿ ದಾಖಲಾತಿ ಕುಸಿತ: ಮುಚ್ಚುವ ಆತಂಕ

ಮಧುಗಿರಿ, ಜು. ೧೧- ಅನುದಾನಿತ ಪ್ರೌಢಶಾಲೆಗಳು ದಾಖಲಾತಿ ಕುಸಿತದ ಕಾರಣವಾಗಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಿಂದುಳಿದ, ಬಡ ಜನರು ಹೆಚ್ಚಾಗಿ ವಾಸಿಸುತ್ತಿರುವ ಗಡಿ ಭಾಗದ ಶಾಲೆಗಳು ಮುಚ್ಚಿದಲ್ಲಿ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಅರ್ಧದಲ್ಲಿಯೇ ಶಾಲೆಯನ್ನು ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧಕ್ಷ ಎಂ. ವೆಂಕಟರಾಮು ಆತಂಕ ವ್ಯಕ್ತಪಡಿಸಿದರು.


ತಾಲ್ಲೂಕಿನ ದೊಡ್ಡೇರಿ ಹೋಬಳಿ ರಂಟವಳ ಗ್ರಾಮದ ಶ್ರೀ ಅರವಿಂದ ಗ್ರಾಮಾಂತರ ಪ್ರೌಢಶಾಲೆ ಇಲ್ಲಿನ ೨೦೦೮-೦೯ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಈ ಶಾಲೆ ೧೯೮೪-೮೫ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು ಉತ್ತಮ ಶಿಕ್ಷಣ ಮತ್ತು ಫಲಿತಾಂಶ ನೀಡುತ್ತಾ ಬಂದಿದೆ. ಇತ್ತೀಚೆಗೆ ಆಂಗ್ಲ ಮಾಧ್ಯಮ ಶಾಲೆ, ಕೆಪಿಎಸ್ ವಸತಿ ಶಾಲೆ ಪ್ರಾರಂಭವಾಗಿದ್ದು, ದಾಖಲಾತಿ ಸಂಖ್ಯೆ ಕುಸಿಯುತ್ತಾ ಬಂದಿದೆ. ಶಾಲೆಗಳಲ್ಲಿ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ ತೆರವಾದ ಹುದ್ದೆಗಳ ನೇಮಕಾತಿ ಆಗದ ಕಾರಣ ಶಿಕ್ಷಕರ ಕೊರತೆ ಮುಖ್ಯ ಕಾರಣವಾಗಿ ಪೋಷಕರು ಅನುದಾನಿತ ಶಾಲೆಗಳಿಗೆ ಸೇರಿಸದ ಇರುವುದರಿಂದ ದಾಖಲಾತಿ ಸಮಸ್ಯೆ ಉಂಟಾಗಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಗ್ರಾಮದ ವಿದ್ಯಾರ್ಥಿಗಳನ್ನು ಈ ಶಾಲೆಗೆ ಸೇರಿಸಲು ಪೋಷಕರನ್ನು ಮನವೊಲಿಸಿ ಶಾಲೆ ಉಳಿಸುವಂತೆ ಕೋರಿದರು.
ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಇಟ್ಟಿರುವ ಗೌರವ ಅಭಿನಂದನಾರ್ಹ, ನೀವುಗಳು ಒಂದು ನೆಲೆ ಕಂಡುಕೊಂಡಿದ್ದು ಗುರುಗಳಿಗಿಂತಲೂ ಮಿಗಿಲಾದ ತಂದೆ-ತಾಯಿಗಳನ್ನು ವಯಸ್ಸಾದ ಕಾಲದಲ್ಲಿ ಪ್ರೀತಿ ಗೌರವಗಳಿಂದ ನೋಡಿಕೊಳ್ಳಿ ಕಡೆಗಣಿಸಬೇಡಿ ಎಂದು ಮನವಿ ಮಾಡಿದರು.


ಹಿಂದಿ ಶಿಕ್ಷಕ ಅಬ್ದುಲ್ ರಜಾಕ್ ಮಾತನಾಡಿ, ಶಾಲೆಯು ನಡೆದು ಬಂದ ದಾರಿಯನ್ನು ಸ್ಮರಿಸಿದರು. ಶಾಲೆಯಲ್ಲಿರುವ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಹಳೆಯ ವಿದ್ಯಾರ್ಥಿಗಳನ್ನು ಗೌರವದಿಂದ ಕಂಡು ಅವರುಗಳ ಸಹಕಾರ ಪಡೆದು ಶಾಲೆಯ ಅಭಿವೃದ್ಧಿಗೆ ತೊಡಗಿಸಿಕೊಳ್ಳಿ. ಹಳೆಯ ವಿದ್ಯಾರ್ಥಿಗಳನ್ನು ಶಾಲಾ ಅಭಿವೃದ್ಧಿಯಲ್ಲಿ ಸಮಿತಿ ರಚಿಸಿ ತೊಡಗಿಸಿಕೊಳ್ಳಲು ಸರ್ಕಾರವೇ ಆದೇಶ ನೀಡಿದೆ. ಶಾಲಾ ಚಟುವಟಿಕೆಗಳಲ್ಲಿ ಅವರುಗಳಿಗೆ ಅವಕಾಶ ಮಾಡಿ ಅನಾವಶ್ಯಕ ಅಲೆದಾಡಿಸಬೇಡಿ ಎಂದು ಮನವಿ ಮಾಡಿದರು.


ಹಳೆಯ ವಿದ್ಯಾರ್ಥಿ ಮನೋಜ್ ಮಾತನಾಡಿ, ಈ ಕಾರ್ಯಕ್ರಮ ನಡೆಸುವ ಮುನ್ನ ತಮಗಾದ ಅನುಭವವನ್ನು ತಿಳಿಸಿ ಪ್ರಜಾ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು ಹಾಗೂ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಶಿಕ್ಷಕರು ಭಾಗವಹಿಸಿದ್ದು ವಿದ್ಯಾರ್ಥಿಗಳಿಂದ ಗೌರವ ಸ್ವೀಕರಿಸಿದರು ಮತ್ತು ಹಿತವಚನ ಹೇಳಿದರು. ಸುಮಾರು ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅನಿಸಿಕೆ ಹಾಗೂ ಅನುಭವವನ್ನು ಪರಸ್ಪರ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.