Home ಜಿಲ್ಲೆ ಕಲಬುರಗಿ ದೇ.ಗಾಣಗಾಪುರ ; ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ದೇ.ಗಾಣಗಾಪುರ ; ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಅಫಜಲಪುರ,ಆ ೩೦: ತಾಲೂಕಿನ ಪ್ರಸಿದ್ಧ ದೇವಲ್ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಶನಿವಾರ ರಾತ್ರಿ ೧ ಗಂಟೆಗೆ ದಿಢೀರ್ ಭೇಟಿ ನೀಡಿ, ಭಕ್ತರ ಅನುಕೂಲಕ್ಕಾಗಿ ಕೈಗೊಳ್ಳಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಕೆಕೆಆರ್‌ಡಿಬಿ ಕಾರ್ಯದರ್ಶಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ಸಂಕನೂರ, ಎಸ್ಪಿ ಅಡ್ಡೂರು ಶ್ರೀನಿವಾಸಲು ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಶಿಖರ್ ಮೋಘಾ ಅವರೊಂದಿಗೆ ದೇವಸ್ಥಾನದ ಆವರಣ, ಸುತ್ತಮುತ್ತಲಿನ ಪ್ರದೇಶ, ಭಕ್ತರ ದರ್ಶನ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ಸ್ಥಳಗಳನ್ನು ಪರಿಶೀಲಿಸಿದರು.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಬೇಕು. ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ಸಮರ್ಪಕ ವಿದ್ಯುತ್ ಬೆಳಕಿನ ವ್ಯವಸ್ಥೆ, ಭಕ್ತರ ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿಯಂತ್ರಣ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಧಾರ್ಮಿಕ ದತ್ತಿ ಇಲಾಖೆಯ ವಸತಿ ಗೃಹಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕುಡಿಯುವ ನೀರು, ಕೊಠಡಿಗಳು ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಪರಿಶೀಲಿಸಿದರು. ಹೊರ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ಮೂಲಸೌಕರ್ಯ ಒದಗಿಸುವಂತೆ ಸೂಚಿಸಿದರು.
ಅಮಾವಾಸ್ಯೆ, ಹುಣ್ಣಿಮೆ ಹಾಗೂ ಗುರುವಾರ ಸೇರಿದಂತೆ ವಿಶೇಷ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ದತ್ತಾತ್ರೇಯ ಮಹಾರಾಜರ ದರ್ಶನಕ್ಕಾಗಿ ದೇವಲ್ ಗಾಣಗಾಪುರಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಶಿವಕಾಂತಮ್ಮ ಮಾತನಾಡಿ, ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪಿಎಸ್‌ಐ ಸಂಗೀತಾ ಸಿಂಧೆ ಮಾತನಾಡಿ, ಭಕ್ತರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ದೇವಸ್ಥಾನದಲ್ಲಿ ಸುಗಮ ದರ್ಶನಕ್ಕಾಗಿ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.