Home ಮುಖಪುಟ ಸುದ್ದಿ ಡಿಸಿ ಭರವಸೆ:ಹೆದ್ದಾರಿ ಪ್ರತಿಭಟನೆ ಹಿಂಪಡೆದ ಕಬ್ಬುಬೆಳೆಗಾರರು

ಡಿಸಿ ಭರವಸೆ:ಹೆದ್ದಾರಿ ಪ್ರತಿಭಟನೆ ಹಿಂಪಡೆದ ಕಬ್ಬುಬೆಳೆಗಾರರು

ಹಾವೇರಿ, ನ.೧೯-ಪ್ರತಿ ಟನ್ ಕಬ್ಬಿಗೆ ೩,೬೦೦ ರೂಪಾಯಿ ನಿಗದಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಕಬ್ಬು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ವಾಹನ ಸಂಚಾರ ತಡೆದು ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಪ್ರತಿ ಟನ್ ಕಬ್ಬಿಗೆ ೩,೬೦೦ ರೂಪಾಯಿ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್? ದಾನಮ್ಮನವರ್ ಮತ್ತು ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಇದೇ ೨೩ರಂದು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯುವ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.


ಕಬ್ಬು ಬೆಳೆಗಾರರು ಕಳೆದ ಮೂರು ತಿಂಗಳಿಂದ ಕಬ್ಬಿಗೆ ಸಮರ್ಪಕ ಬೆಲೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಜಿಲ್ಲಾಡಳಿತ ಕಾರ್ಖಾನೆ ಪ್ರತಿನಿಧಿಗಳ ಮತ್ತು ರೈತ ಮುಖಂಡರ ಐದು ಸಂಧಾನ ಸಭೆಗಳನ್ನು ಕರೆದಿತ್ತು. ಐದು ಸಭೆಗಳಿಗೂ ಮಾಲೀಕರು ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಸ್ಪೋಟಗೊಂಡಿತ್ತು.
ಕಬ್ಬು ಬೆಳೆಗಾರರು ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರು.


ಸಚಿವ ಲಮಾಣಿ ಅವರ ಮನೆ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು.


ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು, ಹಾವೇರಿ ನಗರದ ಹುಕ್ಕೇರಿಮಠದಿಂದ ಪ್ರತಿಭಟನೆ ಮೆರವಣಿಗೆ ನಡೆಸುವ ನಿರ್ಧಾರಕ್ಕೆ ಬಂದಿದ್ದರು. ಅಲ್ಲಿಂದ ತಮ್ಮ ಹೋರಾಟದ ಹಾದಿ ಬದಲಿಸಿ, ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾಗಿದ್ದರು. ಶಿಗ್ಗಾಂವ್ ತಾಲೂಕು ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿರುವ ಟೋಲನಾಕಾದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.