Home ಜಿಲ್ಲೆ ಕಲಬುರಗಿ ದಾದಾಭಾಯಿ ನವರೋಜಿಯವರ ಕೊಡುಗೆ ಅಪಾರ

ದಾದಾಭಾಯಿ ನವರೋಜಿಯವರ ಕೊಡುಗೆ ಅಪಾರ

ಕಲಬುರಗಿ :ಜು.1: ದಾದಾಬಾಯಿ ನವರೋಜಿಯವರು ‘ಸಂಪತ್ತಿನ ಸೋರಿಕೆ ಸಿದ್ಧಾಂತ’ ಪ್ರತಿಪಾದನೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಮತ್ತು ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. ಇವರನ್ನು ‘ಭಾರತದ ಗ್ರ್ಯಾಂಡ್ ಓಲ್ಡ್ ಮ್ಯಾನ್’ ಎಂದು ಕರೆಯಲಾಗುತ್ತದೆ. ನವರೋಜಿಯವರ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ “ದಾದಾಬಾಯಿ ನವರೋಜಿಯವರ ಸ್ಮರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಸಂಪತ್ತು ಮತ್ತು ಸಂಪನ್ಮೂಲಗಳು ಹೇಗೆ ಬ್ರಿಟನ್‍ಗೆ ಹರಿದುಹೋಗುತ್ತಿವೆ ಎಂಬುದನ್ನು ವಿವರಿಸಿದರು. 1885ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸಂಸ್ಥಾಪಕರಲ್ಲಿ ಒಬ್ಬರು. ಅಲ್ಲದೆ, 1886, 1893 ಮತ್ತು 1906ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಗಳಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಬ್ರಿಟಿಷ್ ಸಂಸತ್ ಸದಸ್ಯರು: 1892 ರಲ್ಲಿ ಬ್ರಿಟನ್‍ನ ಹೌಸ್ ಆಫ್ ಕಾಮನ್ಸ್‍ನ ಸಂಸತ್ ಸದಸ್ಯರಾಗಿ ಆಯ್ಕೆಯಾದ ಮೊದಲ ಭಾರತೀಯರು (ಹಾಗೂ ಮೊದಲ ಏಷ್ಯನ್) ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1866 ರಲ್ಲಿ ಲಂಡನ್‍ನಲ್ಲಿ ‘ಈಸ್ಟ್ ಇಂಡಿಯಾ ಅಸೋಸಿಯೇಷನ್’ ಅನ್ನು ಸ್ಥಾಪಿಸಿ, ಭಾರತೀಯರ ಸಮಸ್ಯೆಗಳನ್ನು ಬ್ರಿಟಿಷರ ಗಮನಕ್ಕೆ ತಂದರು. ಭಾರತದಲ್ಲಿ ತಯಾರಿಸಿದ ವಸ್ತುಗಳ ಬಳಕೆ ಮತ್ತು ಬ್ರಿಟಿಷ್ ಉತ್ಪನ್ನಗಳ ಬಹಿಷ್ಕಾರವನ್ನು ಒಳಗೊಂಡ ಸ್ವದೇಶಿ ಚಳವಳಿಯ ಪ್ರಮುಖ ಪ್ರತಿಪಾದಕರಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್. ಬಿರಾದಾರ, ದತ್ತು ಹಡಪದ, ಡಾ.ರಾಜಶೇಖರ ಪಾಟೀಲ, ದಿನೇಶ್ ಮಿಶ್ರಾ ಹಾಗೂ ವಿದ್ಯಾರ್ಥಿಗಳು ಇದ್ದರು.