Home ಜಿಲ್ಲೆ ಸಂಘಟಿತ ಅಪರಾಧಕ್ಕೆ ಬ್ರೇಕ್, ರೌಡಿಗಳ ವಿರುದ್ಧ ಕಠಿಣ ಕ್ರಮ

ಸಂಘಟಿತ ಅಪರಾಧಕ್ಕೆ ಬ್ರೇಕ್, ರೌಡಿಗಳ ವಿರುದ್ಧ ಕಠಿಣ ಕ್ರಮ

ಗದಗ, ಸೆ ೧: ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಐಪಿಎಸ್ ಅಧಿಕಾರಿ ಮಿಥುನ್ ಎಚ್.ಎನ್. ಅವರು ಅಧಿಕಾರ ಸ್ವೀಕರಿಸಿದರು.


ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


ಗದಗ ಜಿಲ್ಲೆ ಸಾಂಸ್ಕöÈತಿಕ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯ ವಾಸ್ತವ ಸ್ಥಿತಿ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯನ್ನು ಅರಿಯುವ ಉದ್ದೇಶದಿಂದ ವಾರದ ಅವಧಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಆಯಾ ಪ್ರದೇಶಗಳ ಸಮಸ್ಯೆಗಳನ್ನು ಅರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಹಬ್ಬಗಳ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ :
ಮುಂದಿನ ದಿನಗಳಲ್ಲಿ ಸಾಲು ಸಾಲಾಗಿ ಹಬ್ಬಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಆದ್ಯತೆ ನೀಡಲಾಗುವುದು ಎಂದರು.


ಜಿಲ್ಲೆಯಲ್ಲಿ ಸುಮಾರು ೫೦೦ ರೌಡಿ ಶೀಟರ್‌ಗಳು ಇರುವ ಮಾಹಿತಿ ಲಭ್ಯವಾಗಿದೆ. ಸಮಾಜದ ಶಾಂತಿ ಕದಡುವ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳ ಮೇಲೆ ನಿಗಾ ವಹಿಸಿ, ಅಗತ್ಯವಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಮಾಜದ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ. ಮಾದಕ ವಸ್ತುಗಳ ಜಾಲದ ಕುರಿತು ಮಾಹಿತಿ ಸಂಗ್ರಹಿಸಿ, ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.


ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ:
ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಹಣ ಕಳೆದುಕೊಂಡ ತಕ್ಷಣವೇ ೧೯೩೦ ಸೈಬರ್ ಕ್ರೆöÊಂ ಸಹಾಯವಾಣಿ ಸಂಖ್ಯೆಗೆ ದೂರು ನೀಡಬೇಕು. ವಂಚನೆಯಾದ ಬಳಿಕ ಆರಂಭಿಕ ಕೆಲವು ಗಂಟೆಗಳಲ್ಲೇ ದೂರು ನೀಡಿದರೆ ಹಣದ ವಹಿವಾಟನ್ನು ತಡೆಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ತಕ್ಷಣ ದೂರು ದಾಖಲಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಧಕ್ಕೆಯಾಗದಂತೆ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಭರವಸೆ ನೀಡಿದರು.