Home ಜಿಲ್ಲೆ ತುಮಕೂರು ಸಹಕಾರಿ ಸಂಘಗಳ ಬೆಳವಣಿಗೆಗೆ ಸದಸ್ಯರ ಸಹಕಾರ ಅಗತ್ಯ

ಸಹಕಾರಿ ಸಂಘಗಳ ಬೆಳವಣಿಗೆಗೆ ಸದಸ್ಯರ ಸಹಕಾರ ಅಗತ್ಯ

ತಿಪಟೂರು, ಸೆ. ೨೨- ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ಪರಸ್ಪರ ಸಹಕಾರ ಅತ್ಯಗತ್ಯ. ಸದಸ್ಯರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗಬೇಕು ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು.


ನಗರದ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಬಯಲು ಸೀಮೆ ಪತ್ತಿನ ಸಹಕಾರ ಸಂಘದ ೨ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ಹಲವು ಸಮಾಜ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದರು.


ಸಹಕಾರ ಸಂಘಗಳು ಹೆಚ್ಚಿನ ಆರ್ಥಿಕ ವಹಿವಾಟು ನಡೆಸುವ ಸಂದರ್ಭದಲ್ಲಿ ವಿವಿಧ ಗೊಂದಲಗಳಿಂದ ತೊಂದರೆಗೆ ಒಳಗಾದ ಉದಾಹರಣೆಗಳಿವೆ. ಆದ್ದರಿಂದ ಬಯಲು ಸೀಮೆ ಪತ್ತಿನ ಸಹಕಾರ ಸಂಘವು ಉತ್ತಮ ಆರ್ಥಿಕ ವಹಿವಾಟು ನಡೆಸುವ ಮೂಲಕ ಸದಸ್ಯರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸಬೇಕು. ಸಾಲ ಪಡೆದ ಸದಸ್ಯರು ನಿಗದಿತ ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.


ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಎನ್. ಬಾನುಪ್ರಶಾಂತ್ ಮಾತನಾಡಿ, ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದರೆ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಹಣಕಾಸು ಹೂಡಿಕೆ ಮಾಡಬೇಕು. ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಬಯಲು ಸೀಮೆ ಪತ್ತಿನ ಸಹಕಾರ ಸಂಘದಲ್ಲಿ ಹೆಚ್ಚಿನ ಠೇವಣಿ ಮಾಡುವುದರ ಜತೆಗೆ ಪಿಗ್ಮಿ ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.


ಸಂಘದ ಅಧ್ಯಕ್ಷ ಆರ್.ಎಂ ಕುಮಾರಸ್ವಾಮಿ ಮಾತನಾಡಿ, ನಮ್ಮ ಸಹಕಾರ ಸಂಘ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸದಸ್ಯರು ಹೆಚ್ಚಿನ ಷೇರುಗಳನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಠೇವಣಿ ಮಾಡುವ ಮೂಲಕ ಸಂಘದ ಆರ್ಥಿಕ ಬೆಳವಣಿಗೆಗೆ ನೆರವಾಗಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಗ್ರೇಡ್-೨ ತಹಶೀಲ್ದಾರ್ ಜಗನ್ನಾಥ್, ಎಚ್.ಸಿ. ನಾಗರಾಜು, ಸದಾಶಿವಯ್ಯ, ಬಾಬು ಸಮರ್ಥ್, ವಿ. ರಂಜಿತ್, ಡಿ. ಕುಮಾರ್, ಲತಾಮಣಿ, ಕವಿತಾ, ತಾಂಡವಮೂರ್ತಿ, ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.