
ಕೋಲಾರ,ಜೂ.೧೫- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಅಧಿಸೂಚನೆಯನ್ನು ಹಿಂತೆಗೆದು ಕಾನೂನುಬದ್ಧ ಅರ್ಹ ಅಭ್ಯರ್ಥಿಗಳನ್ನು ನೇಮಿಸುವಂತೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದಿ ವತಿಯಿಂದ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ, ೨೦೦೫ರ ಅಡಿಯಲ್ಲಿ ಸ್ಥಾಪಿತವಾಗಿರುವ ಮಹತ್ವದ ಕಾನೂನುಬದ್ಧ ಸಂಸ್ಥೆಯಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ, ಮೇಲ್ವಿಚಾರಣೆ ಹಾಗೂ ಪ್ರಚಾರದ ಜವಾಬ್ದಾರಿಯನ್ನು ಹೊಂದಿದೆ.
ಕಾಯ್ದೆ ಮತ್ತು ನೇಮಕಾತಿ ನಿಯಮಗಳ ಪ್ರಕಾರ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಮಕ್ಕಳ ಹಕ್ಕುಗಳು, ಬಾಲ ಕಲ್ಯಾಣ, ಶಿಕ್ಷಣ, ಆರೋಗ್ಯ, ಬಾಲ ನ್ಯಾಯ, ಬಾಲ ಕಾರ್ಮಿಕ ನಿರ್ಮೂಲನೆ, ಮಕ್ಕಳ ರಕ್ಷಣೆ ಸೇರಿದಂತೆ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವ ಹಾಗೂ ಗಮನಾರ್ಹ ಕೊಡುಗೆ ಹೊಂದಿರಬೇಕು.
ಆದರೆ, ದಿನಾಂಕ ೨೭.೦೫.೨೦೨೬ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ನೇಮಕಗೊಂಡಿರುವ ಕೆಲವು ವ್ಯಕ್ತಿಗಳು ಈ ಅರ್ಹತಾ ಮಾನದಂಡಗಳನ್ನು ಪೂರೈಸುವುದಿಲ್ಲ ಎಂಬ ಗಂಭೀರ ಆತಂಕ ವ್ಯಕ್ತವಾಗಿದೆ.
ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂತೋಷ ಕುಮಾರ್ ಅವರ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿನ ಗಮನಾರ್ಹ ಕಾರ್ಯಗಳ ಕುರಿತು ಯಾವುದೇ ಸಾರ್ವಜನಿಕ ದಾಖಲೆ ಅಥವಾ ಮಾಹಿತಿ ಲಭ್ಯವಿಲ್ಲ. ಅದೇ ರೀತಿ ಸದಸ್ಯರಾಗಿ ನೇಮಕಗೊಂಡಿರುವ ಸತ್ಯನಾರಾಯಣ ಶೆಟ್ಟಿ ಹಾಗೂ ಜಗನ್ನಾಥ ಹಲಮಡಗಿ ಅವರಿಗೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ದೀರ್ಘಕಾಲೀನ ಕಾರ್ಯಾನುಭವ ಹೊಂದಿರುವ ಕುರಿತು ಸ್ಪಷ್ಟ ದಾಖಲೆಗಳು ಕಂಡುಬರುವುದಿಲ್ಲ.
ಇದಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಆಯೋಗಕ್ಕೆ ನೇಮಿಸಿರುವುದು ಹಿತಾಸಕ್ತಿ ಸಂಘರ್ಷ ಉಂಟುಮಾಡುವ ಸಾಧ್ಯತೆಯನ್ನು ಹೊಂದಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವ ಆಯೋಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತತೆಯ ಮೇಲೂ ಇದು ಪ್ರಶ್ನೆಗಳನ್ನು ಎಬ್ಬಿಸುತ್ತದೆ.
ನೇಮಕಾತಿ ಪ್ರಕ್ರಿಯೆಯಲ್ಲಿಯೂ ಹಲವು ಗಂಭೀರ ಲೋಪಗಳು ಕಂಡುಬಂದಿವೆ:
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೇಮಕಾತಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಕಂಡುಬರುತ್ತಿದೆ, ೨೦೨೫ರ ತಿದ್ದುಪಡಿ ನಿಯಮಗಳ ಪ್ರಕಾರ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರನ್ನು ಏಕಕಾಲದಲ್ಲಿ ನೇಮಿಸಬೇಕಾದರೂ, ಕೇವಲ ಅಧ್ಯಕ್ಷರು ಹಾಗೂ ಮೂವರು ಸದಸ್ಯರನ್ನು ಮಾತ್ರ ನೇಮಿಸಿ ಉಳಿದ ಹುದ್ದೆಗಳನ್ನು ಖಾಲಿ ಇರಿಸಲಾಗಿದೆ, ಆಯ್ಕೆ ಪ್ರಕ್ರಿಯೆ ಹಾಗೂ ಅಧಿಸೂಚನೆ ಹೊರಡಿಸಿರುವ ಸಂದರ್ಭದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗಿವೆ.
ದಿನಾಂಕ ೨೭.೦೫.೨೦೨೬ರ ನೇಮಕಾತಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು, ಕಾನೂನಿನ ಪ್ರಕಾರ ಅರ್ಹತೆ, ಅನುಭವ ಹಾಗೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ನೇಮಕ ಮಾಡಬೇಕು, ಆಯ್ಕೆ ಪ್ರಕ್ರಿಯೆಯ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು, ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಿತ ಅಧಿಕಾರಿಗಳ ಪಾತ್ರವನ್ನು ಪರಿಶೀಲನೆಗೆ ಒಳಪಡಿಸಬೇಕು, ಮಕ್ಕಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಆಯೋಗದ ವಿಶ್ವಾಸಾರ್ಹತೆ, ಸ್ವಾಯತ್ತತೆ ಹಾಗೂ ನಿಷ್ಪಕ್ಷಪಾತತೆಯನ್ನು ಉಳಿಸಬೇಕು, ನೇಮಕಾತಿ ಪ್ರಕ್ರಿಯೆಯಲ್ಲಿ ಕಂಡುಬಂದ ಲೋಪಗಳ ಕುರಿತು ಸಂಬಂಧಿತ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕು, ಭವಿಷ್ಯದಲ್ಲಿ ಈ ರೀತಿಯ ನೇಮಕಾತಿ ವಿವಾದಗಳು ಮರುಕಳಿಸದಂತೆ ಪಾರದರ್ಶಕ ಆಯ್ಕೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ಟಿ. ವಿಜಯಕುಮಾರ್ ರಾಜ್ಯ ಸಂಘಟನ ಸಂಚಾಲಕರು ,ನಾಗನಾಳ ರಮೇಶ್ ಜಿಲ್ಲಾ ಸಂಘಟನ ಸಂಚಾಲಕರು, ಪಲ್ಲವಿ ತಾಲೂಕು ಸಂಚಾಲಕರು, ಶಾಂತ ಕುಮಾರಿ ಕೆಜಿಎಫ್ ಸಂಚಾಲಕರು, ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು.




























