Home ಜಿಲ್ಲೆ ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೀಡಾಗದಂತೆ ಸ್ಪಂದಿಸಿ: ಈಶ್ವರ ಖಂಡ್ರೆ

ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೀಡಾಗದಂತೆ ಸ್ಪಂದಿಸಿ: ಈಶ್ವರ ಖಂಡ್ರೆ

ಬೀದರ್, ಜೂ. 26: ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ)ಯನ್ನು ಜು.1ರಿಂದ ವಿಬಿಜಿ ರಾಮ್ ಜೀ ಎಂಬ ಹೊಸ ರೂಪದಲ್ಲಿ ಜಾರಿಗೊಳಿಸಲು ಸಜ್ಜಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದ ಅವರು, ಬೀದರ್ ಜಿಲ್ಲೆಯಲ್ಲಿ ವಾಡಿಕೆಯ ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಮನ್ರೇಗಾ ಅಡಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಜುಲೈ 1ರಿಂದ ಹೊಸ ಯೋಜನೆ ಜಾರಿ ಮಾಡಬೇಕಾಗಿದ್ದು, ಇದಕ್ಕೆ ಸನ್ನದ್ಧರಾಗುವಂತೆ ತಿಳಿಸಿದರು.

ಮೊದಲೇ ಮಳೆಯ ಕೊರತೆಯಿಂದ ಆಂತಕಕ್ಕೀಡಾಗಿರುವ ಅನ್ನದಾತರಿಗೆ ತೊಂದರೆ ಆಗದಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೃಷಿ ಅಧಿಕಾರಿಗಳು ರೈತರಿಗೆ ಮಳೆಯ ಕೊರತೆಯಾದಾಗ ಯಾವ ಬೆಳೆ ಬೆಳೆಯಬೇಕು ಎಂಬ ಮಾರ್ಗದರ್ಶನ ಮಾಡಬೇಕು, ರೈತರು ಕಚೇರಿಗೆ ಅಲೆದಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ:

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಖಾಸಗಿ ಬಾವಿಗಳು, ಕೊಳವೆ ಬಾವಿ ಸೇರಿದಂತೆ ಪರ್ಯಾಯ ಜಲ ಮೂಲಗಳನ್ನು ಗುರುತಿಸಿ, ಟ್ಯಾಂಕರ್ ಮಾಲೀಕರೊಂದಿಗೆ ಮಾತನಾಡಿ, ನೀರಿನ ಲಭ್ಯತೆ ಖಚಿತಪಡಿಸಿಕೊಂಡು, ನೀರಿನ ಗುಣಮಟ್ಟ ಪರೀಕ್ಷೆ ಮಾಡಿ ಬಾವಿಗಳ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಜಿಲ್ಲೆಯಲ್ಲಿ ರೈತರ ಹಿತಾಸಕ್ತಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದ ಬೀದರ್ ಮತ್ತು ಗದಗ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಮಳೆ ಕೊರತೆಯ ಸಂಕಷ್ಟದ ಸಮಯದಲ್ಲಿ ರೈತರ ಮತ್ತು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಬಾ ಶರ್ಮಾ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮತ್ತಿತರರು ಪಾಲ್ಗೊಂಡಿದ್ದರು.