
ಅಥಣಿ : ಚಳಿ. ಗಾಳಿ. ಬಿಸಿಲು.ಮಳೆ ಎನ್ನದೆ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಕೊರೊನಾದಂತ ಸಂದಿಗ್ಧ
ಪರಿಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಸ್ವಚ್ಛತಾ ಕಾರ್ಯ ಮಾಡಿದ್ದು ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಕಾನಿಪ ತಾಲೂಕಾ ಘಟಕದ ಅಧ್ಯಕ್ಷ ರಾಕೇಶ ಮೈಗೂರ ಹೇಳಿದರು
ಅವರು ಕಾನಿಪ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ನಗರವನ್ನು ಸ್ವಚ್ಚ ಪರಿಸರ ಸ್ನೇಹಿ ಸುಂದರ ವಾಗಿಡುವಲ್ಲಿ ಪೌರ ಕಾರ್ಮಿಕರ ಪರಿಶ್ರಮ ಅಡಗಿದ್ದು, ಅವರ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಗೌರವ ನೀಡಬೇಕು ಎಂದು ಮನವಿ ಮಾಡಿದರು.
ಕಾನಿಪ ತಾಲೂಕಾ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಮಾತನಾಡಿ, ಪಟ್ಟಣ ಹಾಗೂ ಸಮಾಜದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಕನ್ನಡಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಹಕಾರದೊಂದಿಗೆ ಸತ್ಕರಿಸಿರುವುದು ಸಂತಸದ ಸಂಗತಿ. ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತಾಗಬೇಕು. ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಅವರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಕರ್ತರು ಅವರ ಧ್ವನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಭರವಸೆ ನೀಡಿದರು.
ಈ ವೇಳೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಕಾಂಬಳೆ ಮಾತನಾಡಿ, ಪೌರ ಕಾರ್ಮಿಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಸೆ.23ರಂದು ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ. ನಮ್ಮ ಹೋರಾಟಗಳು ಹಾಗೂ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರ ಸಂಘವು ಪೌರ ಕಾರ್ಮಿಕರನ್ನು ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪತ್ರಕರ್ತರು ಸದಾ ನಮ್ಮೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿರುವುದು ಆಶಾಭಾವನೆ ಮೂಡಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶಿವಕುಮಾರ ಅಪರಾಜ, ರಮೇಶ ಬಾದವಾಡಗಿ, ಪರಶುರಾಮ ನಂದೇಶ್ವರ, ಜಬ್ಬಾರ ಚಿಂಚಲಿ, ವಿಲಾಸ ಕಾಂಬಳೆ, ಸಂದೀಪ ಘಟಕಾಂಬಳೆ, ಯಾಶೀನ್ ಝಾರೆ, ರಾಜು ಕಾವೇರಿ, ಕರವೇ ತಾಲೂಕು ಅಧಕ್ಷ ಶಬ್ಬಿರ ಸಾತಬಟ್ಟೆ, ತಾಲೂಕಾ ಗೌರವ ಅಧ್ಯಕ್ಷ ಸುಂದರ ಸೌದಾಗರ, ಮಂಜು ಹೋಳಿಕಟ್ಟಿ, ಉದ್ಯಮಿ ಸಿದ್ದು ಹಂಡಗಿ, ಪುರಸಭೆ ಆರೋಗ್ಯಾಧಿಕಾರಿ ಎಸ್. ಎ ಸನಗೌಡ, ಮೈಹೆಬೂಬ ಮಹಾಂತ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂಬುದು ನಂಬಿಕೆಯಾಗಿದೆ. ಪಟ್ಟಣ ಸ್ವಚ್ಛವಾಗಿರುವುದರ ಹಿಂದೆ ಪೌರ ಕಾರ್ಮಿಕರ ಬೆವರು ಮತ್ತು ಪರಿಶ್ರಮವಿದೆ. ಅವರ ಸೇವೆಯನ್ನು ಕೇವಲ ಒಂದು ದಿನ ಸ್ಮರಿಸುವುದಲ್ಲ, ಪ್ರತಿದಿನ ಗೌರವಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಸಾರ್ವಜನಿಕರು ಸ್ವಚ್ಛ ಪರಿಸರದಲ್ಲಿ ಬದುಕುವಂತೆ ಮಾಡುವ ಪೌರ ಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಸೇವೆಗೆ ಸಮಾಜ ಸದಾ ಗೌರವ ನೀಡಬೇಕು.
ಶಬ್ಬೀರ್ ಸಾತಬಚ್ಚೆ. ಕರವೇ ತಾಲೂಕು ಅಧ್ಯಕ್ಷ























