
ಹಾಸನ,ಜು.೨೦: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅಂತ್ಯಕ್ರಿಯ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ ಮಾವಿನಕರೆಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿ ನಡೆಯಲಿದೆ.
ಈಗಾಗಲೇ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿರುವ ಜಮೀನಿನಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ. ಬೆಂಗಳೂರಿನ ವಾಸ್ತು ತಜ್ಞ ಹರಿಪ್ರಸಾದ್ ವಾಸ್ತು ಪ್ರಕಾರ ಜಾಗ ಗುರುತು ಮಾಡಿದ್ದು, ಮಧ್ಯಾಹ್ನ ಎರಡು ಗಂಟೆ ನಂತರ ಬೆಂಗಳೂರಿನ ಜೆ.ಪಿ ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಲಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಲಿಸಲು ನಿರ್ಧರಿಸಲಾಗಿದೆ.
ಈ ನಡುವೆ ಅಂತ್ಯಕ್ರಿಯೆಗೆ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದ್ದು,ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು,೪,೦೦೦ ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.ಇದಕ್ಕಾಗಿ ಮೈಸೂರಿನಿಂದ ಕುರ್ಚಿಗಳನ್ನು ತರಿಸಲಾಗಿದ್ದು, ಶಾಮಿಯಾನ ಹಾಗೂ ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ಅಂತಿಮ ಸಂಸ್ಕಾರವು ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದ್ದು, ವಿವಿಧ ಭಾಗಗಳ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ ಲಾಲ್ ಖಟ್ಟರ್, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ.
ಇದಕ್ಕೂ ಮುನ್ನ ಚನ್ನಮ್ಮ ಮೃತದೇಹವನ್ನು ಹುಟ್ಟೂರು ಮುತ್ತಿಗೆ ಹಿರಿಹಳ್ಳಿಗೂ ಕೊಂಡೊಯ್ಯಲಾಯಿತು. ಈ ವೇಳೆ ಗ್ರಾಮಸ್ಥರು ಚನ್ನಮ್ಮಗೆ ಮುತ್ತೈದೆ ಮಡಿಲು ತುಂಬಿಸುವ ಶಾಸ್ತ್ರ ಮಾಡಿದರು. ಮೃತದೇಹಕ್ಕೆ ಹೂವಿನ ಹಾರ ಹಾಕಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಬಳಿಕ ರೇವಣ್ಣ ಮನೆಗೆ ಚನ್ನಮ್ಮ ಪಾರ್ಥಿವ ಶರೀರ ತರುತ್ತಿದ್ದಂತೆ ಸೊಸೆ ಭವಾನಿ ರೇವಣ್ಣ ಮೃತದೇಹಕ್ಕೆ ಆರತಿ ಮಾಡಿದರು. ಬಳಿಕ ಮನೆಯೊಳಗೆ ಚನ್ನಮ್ಮ ಮೃತದೇಹವನ್ನು ಕೊಂಡೊಯ್ಯಲಾಯಿತು.
ಇದಲ್ಲದೆ, ಬೆಳಗ್ಗೆ ೯:೩೦ರವರೆಗೆ ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಮಾವಿನಕೆರೆಗೆ ಸಾಗಿತು. ಮಾರ್ಗಮಧ್ಯೆಯೂ ಸಾರ್ವಜನಿಕರು ಅಂತಿಮ ದರ್ಶನ ಪಡೆದುಕೊಂಡರು. ಮಧ್ಯಾಹ್ನ ಪಾರ್ಥಿವ ಶರೀರ ಮಾವಿನಕೆರೆಗೆ ತಲುಪಿದ್ದು,ರಾಜಕೀಯ ಗಣ್ಯರು ಹಾಗೂ ಕುಟುಂಬದ ಅತ್ಯಾಪ್ತರು ಅಂತಿಮ ದರ್ಶನ ಪಡೆದು ಶದ್ದಾಂಜಲಿ ಸರ್ಮಪಿದರು.


































