
ವಾಷಿಂಗ್ಟನ್/ಬಾಗ್ದಾದ್:ಜು.೨೦-ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾಕ್ನ ಉತ್ತರ ಭಾಗದಲ್ಲಿ ಇರಾನ್ ನಡೆಸಿದ ಭೀಕರ ವೈಮಾನಿಕ ದಾಳಿಗೆ ಅಮೆರಿಕದ ಸೈನಿಕರೊಬ್ಬರು ಬಲಿಯಾಗಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಖಚಿತಪಡಿಸಿದೆ.
ಜೋರ್ಡಾನ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಇರಾನ್ನ ಡ್ರೋನ್ ದಾಳಿಯ ಬಳಿಕ ಪತ್ತೆಯಾದ ಸ್ಫೋಟಕಗಳನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಸಾವು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಒಂದು ತಿಂಗಳ ಹಿಂದೆ ಘೋಷಣೆಯಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಕಳೆದ ಎಂಟು ದಿನಗಳಿಂದ ಎರಡೂ ದೇಶಗಳು ಪರಸ್ಪರರ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿವೆ. ಈ ಹೊಸ ಸಂಘರ್ಷದಲ್ಲಿ ಇದುವರೆಗೆ ನಾಪತ್ತೆಯಾಗಿದ್ದ ನೌಕಾಪಡೆಯ ಪೈಲಟ್ ಸೇರಿದಂತೆ ಒಟ್ಟು ೧೭ ಅಮೆರಿಕನ್ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಮತ್ತೊಂದೆಡೆ, ಅಮೆರಿಕ ನಡೆಸಿದ ಪ್ರತಿದಾಳಿಗೆ ಇರಾನ್ನಲ್ಲಿ ಭಾರಿ ನಷ್ಟ ಸಂಭವಿಸಿದೆ. ಕಳೆದ ಮೂರು ವಾರಗಳಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಇರಾನ್ನ ಕನಿಷ್ಠ ೫೦ ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ೫೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಜೋರ್ಡಾನ್ ಗಡಿಯಲ್ಲಿ ಆತಂಕ
ಇರಾನ್ ಉಡಾಯಿಸಿದ್ದ ಮೂರು ಕ್ಷಿಪಣಿಗಳನ್ನು ಜೋರ್ಡಾನ್ ಸೇನೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ. ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿರುವ ಇರಾನ್ ರಾಯಭಾರಿಗೆ ಜೋರ್ಡಾನ್ ಸರ್ಕಾರವು ತುರ್ತು ಸಮನ್ಸ್ ಜಾರಿ ಮಾಡಿದ್ದು, ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಕಡಕ್ ಎಚ್ಚರಿಕೆ ನೀಡಿದೆ. ಇಸ್ರೇಲ್ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ಗಡಿಭಾಗದಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.
ಅಮೆರಿಕವು ಜೂನ್ ತಿಂಗಳಲ್ಲಿ ನಡೆದ ಒಪ್ಪಂದವನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಇರಾನ್ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅಮೆರಿಕ ಅಧ್ಯಕ್ಷರ ಸಹಿಗೆ ಯಾವುದೇ ಬೆಲೆಯೂ ಇಲ್ಲ ಮತ್ತು ನಂಬಿಕೆಯೂ ಇಲ್ಲ ಎಂಬುದನ್ನು ಈ ಘಟನೆಗಳು ಸಾಬೀತುಪಡಿಸಿವೆ” ಎಂದು ಅವರು ಲಿಖಿತ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.
ವಾಣಿಜ್ಯ ಹಡಗುಗಳಿಗೆ ಇರಾನ್ ಬೆದರಿಕೆ
ಹೊರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ. ತಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಂಚರಿಸಿದ ಎರಡು ವಾಣಿಜ್ಯ ಹಡಗುಗಳು ಅಪಘಾತಕ್ಕೆ ಈಡಾಗಿವೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.
ಅಮೆರಿಕದ ಪ್ರಭಾವಕ್ಕೆ ಒಳಗಾಗಿ ಈ ಮಾರ್ಗದಲ್ಲಿ ಚಲಿಸುವ ಹಡಗುಗಳು ಇಂತಹದ್ದೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಬೆದರಿಕೆ ಹಾಕಿದೆ. ಪ್ರತಿಯಾಗಿ, ಇರಾನ್ನ ದಾಳಿ ನಡೆಸುವ ಸಾಮರ್ಥ್ಯವನ್ನು ಕುಂದಿಸಲು ತಾವು ಕೇವಲ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಅಮೆರಿಕ ಸಮರ್ಥಿಸಿಕೊಂಡಿದೆ.


































