Home ಮುಖಪುಟ ಸುದ್ದಿ ಯುಪಿಐಗೆ ಶುಲ್ಕ : ಮೋದಿಯಿಂದ ಟ್ರಂಪ್ ತುಷ್ಠೀಕರಣ

ಯುಪಿಐಗೆ ಶುಲ್ಕ : ಮೋದಿಯಿಂದ ಟ್ರಂಪ್ ತುಷ್ಠೀಕರಣ

ದೆಹಲಿ.ಸೆ.೧೬- ಯುಪಿಐ ವಹಿವಾಟುಗಳ ಮೇಲಿನ ಹೊಸ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ನೋಟಾ ಪದಕ್ಕೆ ನರೇಂದ್ರ ಅವರ ನಿರಂತರ ಟ್ರಂಪ್ ಓಲೈಕೆ ಎಂಬ ಹೊಸ ಅರ್ಥ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಕಾರ್ಡ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಅಮೆರಿಕದ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕದ ವೀಸಾ ಮತ್ತು ಮಾಸ್ಟರ್‌ಕಾರ್ಡ್ ನಂತಹ ದೈತ್ಯ ಕಂಪನಿಗಳು ಭಾರತದ ಉಚಿತ ಯುಪಿಐ ವ್ಯವಸ್ಥೆಯಿಂದಾಗಿ ಪೈಪೋಟಿ ಎದುರಿಸುತ್ತಿದ್ದವು.ಅವುಗಳಿಗೆ ಭಾರತದ ಡಿಜಿಟಲ್ ಪಾವತಿ ಮಾರುಕಟ್ಟೆಯನ್ನು ಮುಕ್ತಗೊಳಿಸಲು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಓಲೈಸಲು ಮೋದಿ ಸರ್ಕಾರ ಈ ಶುಲ್ಕದ ಹಾದಿ ತೆರೆದಿದೆ ಎಂದು ದೂರಿದ್ದಾರೆ

ಪ್ರಸ್ತುತ ೨,೦೦೦ ಮಿತಿಯನ್ನು ನಿಗದಿಪಡಿಸಲಾಗಿದ್ದರೂ, ಭವಿಷ್ಯದಲ್ಲಿ ಸಾಮಾನ್ಯ ಜನರ ವೈಯಕ್ತಿಕ ವಹಿವಾಟುಗಳಿಗೂ ಶುಲ್ಕ ವಿಸ್ತರಿಸುವ ಮುನ್ಸೂಚನೆ ಇದಾಗಿದೆ ಎಂದು ಜೈರಾಮ್ ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದನ್ನು ಮೋದಿ ಟ್ಯಾಕ್ಸ್ ಮತ್ತು ಯುಪಿಐ ಲೂಟಿ ಎಂದು ಕರೆದಿದ್ದಾರೆ. ಅಲ್ಲದೆ, ೨,೦೦೦ ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಶುಲ್ಕ ವಿಧಿಸುವ ಮೂಲಕ ಸಾಮಾನ್ಯ ಜನರ ಉಳಿತಾಯಕ್ಕೆ ಕನ್ನ ಹಾಕಲಾಗುತ್ತಿದೆ ಎಂದು ಇಬ್ಬರು ನಾಯಕರು ಆರೋಪಿಸಿದ್ದಾರೆ.