Home ಜಿಲ್ಲೆ ಜಮಖಂಡಿಯಲ್ಲಿ ದಿ. ದೇವರಾಜ ಅರಸು ಅವರ 111ನೇ ಜಯಂತಿ ಆಚರಣೆ

ಜಮಖಂಡಿಯಲ್ಲಿ ದಿ. ದೇವರಾಜ ಅರಸು ಅವರ 111ನೇ ಜಯಂತಿ ಆಚರಣೆ

ಜಮಖಂಡಿ: ನಗರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಧೀಮಂತ ನಾಯಕ ದಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉಪ ವಿಭಾಗಾಧಿಕಾರಿ ಶ್ವೇತಾ ಬಿಡಿಕರ ಹಾಗೂ ತಹಶೀಲ್ದಾರ್ ಅನಿಲ್ ಬಡಿಗೇರ ಅವರು ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡರು. ವಿವಿಧ ಹಾಸ್ಟೆಲ್‍ಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿ ಆಚರಣೆಗೆ ಮೆರುಗು ತಂದರು.

ಈ ಸಂದರ್ಭದಲ್ಲಿ ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜಮುಖಿ ಆಡಳಿತದ ಕೊಡುಗೆಗಳನ್ನು ಸ್ಮರಿಸಲಾಯಿತು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ದೇವರಾಜ ಅರಸು ಅವರು ನೀಡಿದ ಕೊಡುಗೆಗಳನ್ನು ಇಂದಿನ ಪೀಳಿಗೆ ಸ್ಮರಿಸುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಕೆ.ಎನ್. ಮರನೂರ, ವಿಸ್ತರಣಾಧಿಕಾರಿ ಮಹೇಶ ನಾಯಕ, ನಿಲಯ ಪಾಲಕರಾದ ಬಸವರಾಜ ಆಲಗೂರ, ಪವನಕುಮಾರ ಜಾಧವ, ಶೀತಲ ಯಲಗುದ್ರಿ, ಅಶ್ವಿನಿ ರಬಕವಿ, ಅನಿತಾ ಶಿರಗೊಂಡ ಹಾಗೂ ಭಾಗ್ಯಶ್ರೀ ಕದಮ ಸೇರಿದಂತೆ ವಿವಿಧ ಹಾಸ್ಟೆಲ್‍ಗಳ ಸಿಬ್ಬಂದಿ, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.