Home ಜಿಲ್ಲೆ ಕಲಬುರಗಿ ನಾಲ್ವರು ಮಕ್ಕಳು ಬೆಂಕಿಸ್ಫೋಟದಲ್ಲಿ ಮೃತಪಟ್ಟ ಪ್ರಕರಣಹೊಟೇಲ್ ಮಾಲೀಕನಿಗೆ 3 ವರ್ಷ ಜೈಲು,1.10 ಲಕ್ಷ ರೂ ದಂಡ

ನಾಲ್ವರು ಮಕ್ಕಳು ಬೆಂಕಿಸ್ಫೋಟದಲ್ಲಿ ಮೃತಪಟ್ಟ ಪ್ರಕರಣಹೊಟೇಲ್ ಮಾಲೀಕನಿಗೆ 3 ವರ್ಷ ಜೈಲು,1.10 ಲಕ್ಷ ರೂ ದಂಡ

ಕಲಬುರಗಿ,ಅ.1: ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಕಪಳ್ಳಿ ಫತ್ತುನಾಯಕ ತಾಂಡಾದ ಚಿಕ್ಕ ಹೊಟೇಲ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪೆಟ್ರೋಲ್ ಕ್ಯಾನು ಸ್ಪೋಟಗೊಂಡು 4 ಮಕ್ಕಳ ಸಾವಿಗೆ ಕಾರಣನಾದ ಅಪರಾಧಿಗೆ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೇಡಂ ಪೀಠವು 3 ವರ್ಷ ಜೈಲು ಶಿಕ್ಷೆ ಮತ್ತು 1.10 ಲಕ್ಷ ರೂ ದಂಡ ವಿಧಿಸಿದೆ.
ಹೊಟೇಲ್ ಅಂಗಡಿ ಮಾಲೀಕ ವೀರಶೆಟ್ಟಿ ಶಿಕ್ಷೆಗೊಳಗಾದ ವ್ಯಕ್ತಿ.2017 ರ ಸೆಪ್ಟೆಂಬರ್ 25 ರಂದು ಸಂಜೆ ಹೊತ್ತಿಗೆ ವೀರಶೆಟ್ಟಿ ತನ್ನ ಚಿಕ್ಕ ಹೊಟೇಲ್ ನಲ್ಲಿ ಸ್ಟೋ ಹೊತ್ತಿಸಿ ಭಜಿ ಕರಿಯುತ್ತಿದ್ದಾಗ ಸ್ಟೋ ಸ್ಪೋಟಗೊಂಡು ಪೆಟ್ರೋಲ್ ಕ್ಯಾನಿಗೆ ತಗುಲಿ ಉಂಟಾದ ಬೆಂಕಿಗೆ, ಅಂಗಡಿಗೆ ಬಂದಿದ್ದ ನಾಲ್ಕುಮಕ್ಕಳಾದ ಪ್ರೀತಂ ( 5 ವರ್ಷ),ಅಕ್ಷತಾ ( ರಕ್ಷಿತಾ ( 5 ವರ್ಷ) ,ರಿತೇಶ ( 5 ವರ್ಷ) ಮತ್ತು ರಿತಿಕಾ ( 3 ವರ್ಷ) ಸುಟ್ಟಗಾಯಗಳಿಂದ ಮೃತರಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಚಿಂಚೋಳಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಪರಿಶೀಲಿಸಿದ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೇಡಂ ಪೀಠದ ನ್ಯಾಯಾಧೀಶ ಸಿರಾಜುದ್ದೀನ್ ಎ ಅವರು ಶಿಕ್ಷೆ ಮತ್ತು ದಂಡವನ್ನು ನೀಡಿ ಆದೇಶಿಸಿದ್ದಾರೆ.ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ ಆರ್ ನಾಗರಾಜ ಮಸ್ಕಿ ಅವರು ವಾದ ಮಂಡಿಸಿದ್ದರು.