Home ಮುಖಪುಟ ಸುದ್ದಿ ಸಂವಿಧಾನ ಹತ್ಯಾ ದಿವಸ್ ಆಚರಣೆಗೆ ಕರೆ

ಸಂವಿಧಾನ ಹತ್ಯಾ ದಿವಸ್ ಆಚರಣೆಗೆ ಕರೆ

ತುರ್ತು ಪರಿಸ್ಥಿತಿ ಕರಾಳದಿನ
ನವದೆಹಲಿ, ಜೂ. ೨೫-
೧೯೭೫ರಲ್ಲಿ ಹೇರಲಾಗಿದ್ದ ದೇಶದ ತುರ್ತು ಪರಿಸ್ಥಿತಿಯ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರು “ಸಂವಿಧಾನ ಹತ್ಯಾ ದಿವಸ್” (ಸಂವಿಧಾನ ಕೊಲೆ ದಿನ) ಎಂದು ಉಲ್ಲೇಖಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇದು ಅತ್ಯಂತ ಕರಾಳ ಅಧ್ಯಾಯವಾಗಿದ್ದು, ನಾಗರಿಕರು ಸದಾ ಜಾಗೃತರಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಈ ಕುರಿತು ಎಕ್ಸ್ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, “೧೯೭೫ರ ಜೂನ್ ೨೫ರಂದು ಭಾರತೀಯ ಪ್ರಜಾಪ್ರಭುತ್ವವನ್ನು ಕ್ರೂರವಾಗಿ ಹತ್ತಿಕ್ಕಲಾಗಿತ್ತು. ಆ ಕರಾಳ ದಿನದ ನೆನಪು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕರ ಹಕ್ಕುಗಳನ್ನು ಸದಾ ರಕ್ಷಿಸಲು ನಮಗೆ ಪ್ರೇರಣೆ ನೀಡುತ್ತದೆ. ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ವಿರೋಧಿಸಿದ ಎಲ್ಲಾ ಮಹನೀಯರಿಗೆ ನನ್ನ ಗೌರವಪೂರ್ವಕ ನಮನಗಳು” ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಕಾಂಗ್ರೆಸ್ ಸರ್ಕಾರದ ಅಂದಿನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ತುರ್ತು ಪರಿಸ್ಥಿತಿಯ ಅವಧಿಯಲ್ಲಿ ದೇಶದ ಕೋಟ್ಯಂತರ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಮತ್ತು ವಾಕ್ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿತ್ತು” ಎಂದು ಅವರು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಸುರಕ್ಷಿತವಾಗಿವೆ ಎಂದು ಅವರು ಶ್ಲಾಘಿಸಿದರು.

ಏನಿದು ೧೯೭೫ರ ತುರ್ತು ಪರಿಸ್ಥಿತಿ ಹಿನ್ನೆಲೆ
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಸಂವಿಧಾನದ ೩೫೨ನೇ ವಿಧಿಯಡಿ “ಆಂತರಿಕ ಅಶಾಂತಿ”ಯ ಕಾರಣ ನೀಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇದು ೧೯೭೫ರ ಜೂನ್ ೨೫ರಿಂದ ೧೯೭೭ರ ಮಾರ್ಚ್ ೨೧ರವರೆಗೆ (ಒಟ್ಟು ೨೧ ತಿಂಗಳು) ಜಾರಿಯಲ್ಲಿತ್ತು.

ಪ್ರಮುಖ ಪರಿಣಾಮಗಳು:
ಹಕ್ಕುಗಳ ಹರಣ: ಸಂವಿಧಾನದ ವಿಧಿ ೧೪, ೧೯, ೨೧ ಮತ್ತು ೨೨ರ ಅಡಿಯಲ್ಲಿ ಸಿಗುವ ನಾಗರಿಕರ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ವಿರೋಧ ಪಕ್ಷದ ಪ್ರಮುಖ ನಾಯಕರನ್ನು ಜೈಲಿಗಟ್ಟಲಾಯಿತು. ಪತ್ರಿಕೆಗಳು ಮತ್ತು ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಕಠಿಣ ನಿಯಂತ್ರಣ ಹೇರಲಾಯಿತು. ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಸುದ್ದಿ ಪ್ರಕಟಿಸುವಂತಿರಲಿಲ್ಲ.

ಪ್ರಜಾಪ್ರಭುತ್ವದ ಆಶಯಗಳನ್ನು ಬಲಿಕೊಟ್ಟು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮಾಡಿದ ಐತಿಹಾಸಿಕ ತಪ್ಪನ್ನು ದೇಶದ ಜನತೆಗೆ ನೆನಪಿಸಲು ಮತ್ತು ಸಂವಿಧಾನದ ಮಹತ್ವವನ್ನು ಸಾರಲು ಬಿಜೆಪಿ ಪ್ರತಿವರ್ಷ ಜೂನ್ ೨೫ ಅನ್ನು ಕರಾಳ ದಿನವನ್ನಾಗಿ ಆಚರಿಸುತ್ತಾ ಬಂದಿದೆ.