Home ಜಿಲ್ಲೆ ತುಮಕೂರು ಜೆಡಿಎಸ್‌ಗೆ ಕಾರ್ಮಿಕರ ಕರೆ ತರಲು ಕರೆ; ಕಾರ್ಮಿಕ ಘಟಕಕ್ಕೆ ಅಶ್ವತ್ಥ್, ಕಾಂತರಾಜು ನೇಮಕ

ಜೆಡಿಎಸ್‌ಗೆ ಕಾರ್ಮಿಕರ ಕರೆ ತರಲು ಕರೆ; ಕಾರ್ಮಿಕ ಘಟಕಕ್ಕೆ ಅಶ್ವತ್ಥ್, ಕಾಂತರಾಜು ನೇಮಕ

ತುಮಕೂರು, ಅ. ೨- ದುಡಿಯುವ ವರ್ಗಗಳಿಗೆ ರಾಜಕೀಯ ಶಕ್ತಿ ತುಂಬಬೇಕು. ಅವರ ಸಮಸ್ಯೆಗಳಿಗೆ ಜೆಡಿಎಸ್ ಧ್ವನಿಯಾಗಿ ಸ್ಪಂದಿಸಬೇಕು. ಈ ಆಶಯದಲ್ಲಿ ಕಾರ್ಮಿಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿ ಕೊಂಡು ಅವರ ಸಂಘಟನಾ ಸಾಮರ್ಥ್ಯ ಬೆಳೆಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ನಿಂಗಪ್ಪ ಹೇಳಿದರು.


ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಮಿಕ ಘಟಕ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ವರ್ಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಜೆಡಿಎಸ್‌ಗೆ ಕರೆ ತಂದು, ಅವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಪಕ್ಷದ ಕಾರ್ಮಿಕ ಘಟಕ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.


ಜೆಡಿಎಸ್ ಕಾರ್ಮಿಕ ಘಟನ ಜಿಲ್ಲಾಧ್ಯಕ್ಷ ಅಶ್ವತ್ಥ್‌ಕುಮಾರ್ ಕಾರ್ ಮೊಬೈಲ್ ಮಾತನಾಡಿ, ದುಡಿಯುವ ಕಾರ್ಮಿಕರ ಪರವಾಗಿ ಜೆಡಿಎಸ್ ನಿಲ್ಲುತ್ತದೆ. ಅವರಿಗೆ ಸಲ್ಲಬೇಕಾದ ಸವಲತ್ತುಗಳನ್ನು ತಲುಪಿಸಲು, ಸಮಸ್ಯೆಗಳು ಎದುರಾದಾಗ ಬಗೆಹರಿಸಲು ಜೆಡಿಎಸ್ ಪಕ್ಷ ಬೆಂಬಲವಾಗಿ ನಿಲ್ಲುತ್ತದೆ ಎಂದರು.


ಜಿಲ್ಲೆಯ ಕಾರ್ಖಾನೆಗಳಲ್ಲಿ ದುಡಿಯುವ ಸಾವಿರಾರು ಅಸಂಘಟಿತ ಕಾರ್ಮಿಕರು, ದಿನಗೂಲಿ ನೌಕರರಿದ್ದಾರೆ. ಅವರನ್ನು ಜೆಡಿಎಸ್ ಮೂಲಕ ಸಂಘಟಿಸಬೇಕು. ಅವರಿಗೆ ನ್ಯಾಯ, ಅರ್ಹ ಸವಲತ್ತು ಒದಗಿಸಲು ಯಾವುದೇ ಹೋರಾಟಕ್ಕೂ ಜೆಡಿಎಸ್ ಸಿದ್ಧವಿದೆ. ಎಲ್ಲ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದ ಸಂಘಟನೆ ಜತೆಗೆ ಕಾರ್ಮಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಘಟಕ ಕಾರ್ಯದರ್ಶಿಯನ್ನಾಗಿ ಕೋಳಿಹಳ್ಳಿ ಅಶ್ವತ್ಥ್ ಹಾಗೂ ಗ್ರಾಮಾಂತರ ಘಟಕ ಅಧ್ಯಕ್ಷರನ್ನಾಗಿ ಕಾಂತರಾಜ್ ಅವರನ್ನು ಜಿಲ್ಲಾಧ್ಯಕ್ಷ ಹೆಚ್.ನಿಂಗಪ್ಪ ನೇಮಕ ಮಾಡಿ, ನೇಮಕಾತಿ ಪತ್ರ ನೀಡಿ ಶುಭಕೋರಿದರು.


ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಮೋಹನ್‌ಕುಮಾರ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.