Home ಜಿಲ್ಲೆ ಕಲಬುರಗಿ ಕೇಬಲ್ ವೈರ್ ಕಳವು: 6 ಜನರ ಬಂಧನ

ಕೇಬಲ್ ವೈರ್ ಕಳವು: 6 ಜನರ ಬಂಧನ

ಕಲಬುರಗಿ,ಅ.6-ಕೇಬಲ್ ವೈರ್, ಮೋಟರ್ ಪಂಪ್ ಮತ್ತು ಸ್ಟಾಟರ್ ಕಳ್ಳತನ ಮಾಡುತ್ತಿದ್ದ 6 ಜನ ಕಳ್ಳರನ್ನು ಅಫಜಲಪುರ ಠಾಣೆ ಪೊಲೀಸರು ಬಂಧಿಸಿ 1.86 ಲಕ್ಷ ರೂ.ಮೊತ್ತದ 4,620 ಫೀಟ್ ಉದ್ದದ ಕೇಬಲ್ ವೈರ್ ಹಾಗೂ 9,600 ರೂ.ನಗದು ಜಪ್ತಿ ಮಾಡಿದ್ದಾರೆ.
ಅಫಜಲಪುರದ ಅರುಣ್ ತಂದೆ ಪೀರಪ್ಪ ಸಿನ್ನೂರ್, ಮಂಜುನಾಥ ತಂದೆ ಪೀರಪ್ಪ ಶಂಬೆವಾಡ, ಮಣಿಕಂಠ ತಂದೆ ಶ್ರೀಶೈಲ್ ಶಟಗಾರ, ಶಂಕರ ತಂದೆ ಮೌನೇಶ್ ಸುತಾರ್ ಎಂಬುವವರನ್ನು ವಶಕ್ಕೆ ಪಡೆದು 71,600 ರೂ.ಮೌಲ್ಯದ 1790 ಫೀಟ್ ಕೇಬಲ್ ವೈರ್, 82 ಸಾವಿರ ರೂ.ಮೌಲ್ಯದ 2050 ಫೀಟ್ ಕೇಬಲ್ ವೈರ್ ಮತ್ತು 28 ಸಾವಿರ ರೂ.ಮೌಲ್ಯದ 700 ಫೀಟ್ ಕೇಬಲ್ ವೈರ್, ಸಂದೀಪ ತಂದೆ ಶರಣಪ್ಪ ಗಾಯಕವಾಡ ಮತ್ತು ದುಂಡೇಶ ತಂದೆ ಮಾಳಪ್ಪ ಅಳ್ಳಗಿ ಎಂಬುವವರನ್ನು ಬಂಧಿಸಿ 9,600 ರೂ.ನಗದು ಮತ್ತು 4800 ರೂ.ಮೌಲ್ಯದ 80 ಫೀಟ್ ಕೇಬಲ್ ವೈರ್ ಜಪ್ತಿ ಮಾಡಿದ್ದಾರೆ.
ಒಟ್ಟು 4 ಪ್ರಕರಣಗಳಲ್ಲಿ 6 ಜನ ಆರೋಪಿಗಳನ್ನು ಬಂಧಿಸಿ 1,86,400 ರೂ.ಮೌಲ್ಯದ 4,620 ಫೀಟ್ ಉದ್ದದ ಕೇಬಲ್ ವೈರ್ ಹಾಗೂ 9,600 ನಗದು ಜಪ್ತಿ ಮಾಡಿದ್ದು, ಇನ್ನೂ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಕಾರ್ಯ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಹಾಗೂ ಇತರ 11 ಜನರ ಮೋಟಾರ್ ಪಂಪ್‍ಗಳ ಕೇಬಲ್ ವೈರ್ ಕಳವು ಮಾಡಲಾಗಿದೆ ಎಂದು ಅಫಜಲಪುರ ತಾಲ್ಲೂಕಿನ ಮಣ್ಣೂರ ಗ್ರಾಮದ ಚಂದ್ರಕಾಂತ ಹಳಿಮನಿ ಅವರು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ದೇಸಾಯಿ ಕಲ್ಲೂರ, ಮಣ್ಣೂರ ಹಾಗೂ ಅಫಜಲಪುರ ಸೀಮಾಂತರದಲ್ಲಿ ರೈತರ ಮೋಟಾರ್ ಪಂಪ್, ಕೇಬಲ್ ವೈರ್ ಮತ್ತು ಸ್ಟಾಟರ್‍ಗಳು ಕಳ್ಳತನವಾದ ಬಗ್ಗೆ ದೂರು ದಾಖಲಾಗಿದ್ದವು.
ಈ ಪ್ರಕರಣಗಳ ಪತ್ತೆಗೆ ಆಳಂದ ಉಪ ವಿಭಾಗದ ಡಿಎಸ್‍ಪಿ ತಮ್ಮಾರಾಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಲಖನ್ ಆರ್.ಮಸಗುಪ್ಪಿ ಅವರ ನೇತೃತ್ವದಲ್ಲಿ ಅಫಜಲಪುರ ಠಾಣೆ ಪಿಎಸ್‍ಐಗಳಾದ ಶ್ರೀಶೈಲ ಅಂಬಾಟಿ, ಬಸವರಾಜ, ಎಎಸ್‍ಐ ರಾಜಶೇಖರ, ಸಿಬ್ಬಂದಿಗಳಾದ ಕಾಶಿನಾಥ, ಮಲ್ಲಿನಾಥ, ಸಂತೋಷ, ಮಲ್ಲಿನಾಥ, ಆನಂದ, ಯಲ್ಲಪ್ಪ, ಚಿದಾನಂದ, ಭಾಗಣ್ಣ, ಶಿವಶರಣ, ಶಿವಯ್ಯಾ ಹಿರೇಮಠ ಮತ್ತು ಮುಕ್ತುಮ್ ಪಟೇಲ್ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೇಬಲ್ ವೈರ್, ಮೋಟರ್ ಪಂಪ್ ಮತ್ತು ಸ್ಟಾಟರ್ ಕಳ್ಳತನ ಮಾಡುತ್ತಿದ್ದ 6 ಜನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.