Home ಮುಖಪುಟ ಸುದ್ದಿ ಸಂಪುಟ ರಚನೆ: ಡಿಕೆಶಿ, ಸಿದ್ದು ದೆಹಲಿಗೆ

ಸಂಪುಟ ರಚನೆ: ಡಿಕೆಶಿ, ಸಿದ್ದು ದೆಹಲಿಗೆ

ಬೆಂಗಳೂರು, ಜೂ. ೧- ಸಚಿವ ಸಂಪುಟ ರಚನೆ, ಕೆಪಿಸಿಸಿ ಅಧ್ಯಕ್ಷ ಹುದ್ದೆ, ಡಿಸಿಎಂ ಸ್ಥಾನ ಕುರಿತಂತೆ ವರಿಷ್ಠರ ಜತೆ ಚರ್ಚಿಸಿ ಎಲ್ಲವನ್ನು ಅಂತಿಮಗೊಳಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ತೆರಳಿದರು.


ಜೂ. ೩ ರಂದು ನಡೆಯುವ ನೂತನ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ೮-೧೦ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಯಾರನ್ನೆಲ್ಲಾ ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಪಟ್ಟಿಯನ್ನು ಅಂತಿಮಗೊಳಿಸಲಿದೆ.


ಇಂದು ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಹಾಗೂಸಿದ್ದರಾಮಯ್ಯ ಇಬ್ಬರೂ ತಮ್ಮ ಕಡೆಯಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಹೆಸರುಗಳ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ಹೈಕಮಾಂಡ್ ಎಲ್ಲವನ್ನು ಅಳೆದು ತೂಗಿ ಸಚಿವ ಪಟ್ಟಿಯನ್ನು ಅಂತಿಮಗೊಳಿಸಲಿದೆ.


ಉಪಮುಖ್ಯಮಂತ್ರಿ ಹುದ್ದೆಗೆ ಸಿದ್ಧು ಪಟ್ಟು
ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಪ್ರಸ್ತಾವನ್ನು ಬಹುತೇಕ ಕೈಬಿಡುವ ನಿರ್ಧಾರಕ್ಕ ಬಂದಿದ್ದರೂ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಪಟ್ಟು ಹಿಡಿಯುವ ಸಾಧ್ಯತೆಗಳಿವೆ.


ಜತೆಗೆ ಮೊದಲ ಹಂತದ ಸಂಪುಟ ರಚನೆಯಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸ್ಥಾನ ನೀಡುವಂತೆಯೂ ಅವರು ಹೈಕಮಾಂಡ್ ಮುಂದೆ ಬೇಡಿಕೆ ಇಡಲಿದ್ದಾರೆ. ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಮೊದಲಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಇವರುಗಳೊಂದಿಗೆ ಚರ್ಚಿಸಿ ಮೊದಲ ಹಂತದಲ್ಲಿ ಯಾರನ್ನೆಲ್ಲಾ ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಪಟ್ಟಿಯನ್ನು ಅಂತಿಮಗೊಳಿಸಿಕೊಂಡು ನಂತರ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಅವರ ಒಪ್ಪಿಗೆ ಪಡೆದು ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡುವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.


ಸಚಿವ ಸಂಪುಟದ ಸ್ವರೂಪ ಹೇಗಿರಬೇಕು ಜಾತಿವಾರು, ಪ್ರಾದೇಶಿಕತೆ ಲೆಕ್ಕಾಚಾರ, ಹಿರಿಯ-ಕಿರಿಯ ಮಾನದಂಡಗಳನ್ನು ಆಧರಿಸಿ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ.
ಸ್ಪೀಕರ್ ಆಯ್ಕೆ ಬಗ್ಗೆಯೂ ಚರ್ಚೆ


ಮುಂದಿನ ಎರಡು ವರ್ಷಗಳಲ್ಲಿ ಯಾರನ್ನು ಸಭಾಧ್ಯಕ್ಷರನ್ನಾಗಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಹಾಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವರಾಗುವುದು ಪಕ್ಕಾ ಆಗಿದ್ದು, ಆ ಸ್ಥಾನಕ್ಕೆ ಯಾರನ್ನು ತರಬೇಕು ಎಂಬ ಬಗ್ಗೆಯೂ ದೆಹಲಿಯಲ್ಲಿ ಇಂದು ನಡೆಯುವ ಸಭೆಯಲ್ಲಿ ತೀರ್ಮಾನಗಳು ಆಗಲಿವೆ.


ಇಂದು ಇಡೀ ದಿನ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ದೆಹಲಿಯಲ್ಲೇ ಉಳಿದು ವರಿಷ್ಠರ ಜತೆ ಸಚಿವರುಗಳ ಹೆಸರನ್ನು ಅಂತಿಮಗೊಳಿಸುವ ಕಸರತ್ತಿನಲ್ಲಿ ಭಾಗಿಯಾಗಲಿದ್ದಾರೆ. ಬಹುತೇಕ ನಾಳೆ ಹೊತ್ತಿಗೆ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ.