
ಬೆಂಗಳೂರು, ಜೂ. ೧೨- ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹರಡುತ್ತಿರುವ ಸುಳ್ಳು ಸುದ್ದಿಗೆ ನಟ ಪ್ರಕಾಶ್ ರಾಜ್ ಕಿಡಿಕಾರಿ, ಈ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ಉತ್ತರಿಸುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ನಮಸ್ಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಲವು ಸುದ್ದಿಗಳು ಚರ್ಚೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಚಾರ ಮತ್ತು ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ಇಂತಹ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವೂ ಆಗಿದೆ ಎಂದಿದ್ದಾರೆ.
ಸದ್ಯ ನಾನು ದೂರದ ಊರಿನಲ್ಲಿ ಇದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೂ ಗಾಳಿ ಮಾತುಗಳನ್ನು ಮತ್ತು ಕೆಲವು ಧುರುಳರು ಈ ಸುದ್ದಿಗೆ ಕಟ್ಟಲು ಯತ್ನಿಸುತ್ತಿರುವ ರೆಕ್ಕೆಪುಕ್ಕಗಳನ್ನು ನಂಬದಿರಿ ಎಂದು ಪ್ರಕಾಶ್‌ರಾಜ್ ಹೇಳಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದ ಮಾಸ್ಕ್ ಮ್ಯಾನ್ ಎಂದೇ ಕುಖ್ಯಾತಿ ಪಡೆದಿರುವ ಚಿನ್ನಯ್ಯ ಹೈಕೋರ್ಟ್ ಅರ್ಜಿ ಸಲ್ಲಿಸಿ ಧರ್ಮಸ್ಥಳ ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲು ಹಾಗೂ ಈ ಪ್ರಕರಣದ ಪಿತೂರಿದಾರರ ವಿರುದ್ದ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಈ ಷಡ್ಯಂತ್ರದಲ್ಲಿ ವಿಠ್ಠಲ್‌ಗೌಡ, ಜಯಂತ್, ಕುಡ್ಲರಾಮ್ ಪೇಜ್ನಾ ಅಜಯ್, ಅಂಚನ್, ಯೂಟ್ಯೂಬರ್ ಸಮೀರ್ ಎಂ.ಡಿ. ಹೆಸರನ್ನು ಉಲ್ಲೇಖಿಸಿ, ನಟ ಪ್ರಕಾಶ್ ರಾಜ್ ಸಹ ನನ್ನ ಫೋನ್ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ.
ನಟ ಪ್ರಕಾಶ್ ರಾಜ್ ರವರ ಹೆಸರನ್ನು ಮಾಸ್ಕ್ ಮ್ಯಾನ್ ಚಿನ್ನಯ್ಯ ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿ, ಯಾವುದೇ ಗಾಳಿ ಸುದ್ದಿಗಳನ್ನು ನಂಬಬೇಡಿ. ಇದಕ್ಕೆ ನಾನು ಸದ್ಯದಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಚಿನ್ಯಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಈ ಪ್ರಕರಣದ ಸಂಚುಕೋರರಿಗೆ ಕೇರಳದಿಂದ ಹಣ ಬರುತ್ತಿತ್ತು. ಚಿತ್ರದುರ್ಗದ ರಮಾನಾಗರಾಜು ಎಂಬುವರು ನಿಯಮಿತವಾಗಿ ಹಣ ಕೊಡುತ್ತಿದ್ದರು ಎಂದು ಉಲ್ಲೇಖಿಸಿದ್ದಾನೆ. ಜತೆಗೆ ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿ ಡಾ. ವೀರೇಂದ್ರಹೆಗ್ಗಡೆ ಅವರ ವಿರುದ್ಧ ಮಾಡಿದ ಷಡ್ಯಂತ್ರದ ವಿರುದ್ಧ ಒಟ್ಟು ಬಜೆಟ್ ೨೦೦ ಕೋಟಿ ರೂ. ಇದ್ದು, ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ನನಗೆ ೫೦ ಲಕ್ಷ ರೂ. ನೀಡುವುದಾಗಿ ಮಹೇಶ್ ಶೆಟ್ಟಿ ತಿಮ್ಮರೋಡಿ ಭರವಸೆ ನೀಡಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

























